ಶಿವಸೇನೆಯ ನಾಟಕ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ: ಡಿವಿಎಸ್ ಟೀಕೆ

Update: 2019-11-12 14:26 GMT

ಉಡುಪಿ, ನ.12: ಮಹಾರಾಷ್ಟ್ರ ರಾಜ್ಯದಲ್ಲಿ ಜನಾದೇಶವು ಬಿಜೆಪಿ ಹಾಗೂ ತಂಡಕ್ಕೆ ದೊರೆತಿದೆ. ಅಧಿಕಾರಕ್ಕಾಗಿ ನಮ್ಮ ಮಿತ್ರರಾದ ಶಿವಸೇನೆಯವರು ನಾಟಕ ಆಡುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದುದು. ಇದು ಯಾವುದೇ ರೀತಿಯಲ್ಲಿ ಅವರಿಗೆ ಶೋಭೆ ತರುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಮಲ್ಪೆ ಪಡುಕೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆ ಮತ್ತು ನಾವು ಹಲವು ವರ್ಷಗಳಿಂದ ಮಿತ್ರರಾಗಿದ್ದೇವೆ. ಮುಂದೆಯೂ ನಾವು ಮಿತ್ರರಾಗಿರಬೇಕು. ನಮ್ಮ ಅರ್ಧದಷ್ಟು ಸಂಖ್ಯೆ ಅವರಲ್ಲಿ ಇಲ್ಲ. ಆದರೂ ನಾವು ಅವರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತೇವೆ. ನಮ್ಮ ಜೊತೆ ಬನ್ನಿ ನಾವು ಮೋದಿ ಮಾದರಿಯ ಆಡಳಿತ ಮಹಾರಾಷ್ಟ್ರದ ಜನತೆ ನೀಡುವ ಎಂದು ಈ ಮೂಲಕ ಅವರಿಗೆ ಹೇಳುತ್ತೇನೆ ಎಂದು ತಿಳಿಸಿದರು.

ಶಿವಸೇವೆಯವರ ಜೊತೆ ಬೇರೆ ಯಾವುದೇ ಪಕ್ಷದವರು ಹೊಂದಾಣಿಕೆ ಮಾಡಿಲ್ಲ. ರಾಜ್ಯಪಾಲರು ಆರಂಭದಲ್ಲಿ ಬಿಜೆಪಿಯನ್ನು, ನಂತರ ಶಿವಸೇನೆ ಮತ್ತು ಎನ್‌ಸಿಪಿಯನ್ನು ಕರೆದರು. ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರಿಗಾದರೂ ಆಡಳಿತ ನಡೆಸಲು ಅವಕಾಶ ಮಾಡಿಕೊಡುವುದು ಧರ್ಮ. ಅದನ್ನು ರಾಜ್ಯಪಾಲರು ಮಾಡುತ್ತಿದ್ದಾರೆ. ಮುಂದೆ ರಾಷ್ಟ್ರಪತಿ ಆಡಳಿತವೋ ಅಥವಾ ಬೇರೆ ಏನೋ ಆಗುತ್ತದೆ ಎಂದರು.

ಅನರ್ಹರ ತೀರ್ಪು ಬಂದ ಮೇಲೆ ನಾವು ಮುಂದಿನ ವಿಚಾರವನ್ನು ನಿಶ್ಚಯ ಮಾಡುತ್ತೇನೆ. ಜನಾದೇಶ ಒಂದು ಕಡೆಯಾದರೆ ಇನ್ನೊಂದು ಕಡೆ ನ್ಯಾಯಲಯಕ್ಕೂ ನಾವು ಗೌರವ ಕೊಡುತ್ತೇವೆ. ರಾಮಜನ್ಮ ಭೂಮಿ ತೀರ್ಪಿನ ಮಾದರಿಯಲ್ಲಿ ಈ ವಿಚಾರದಲ್ಲೂ ನಾವು ವರ್ತಿಸುತ್ತೇವೆ ಎಂದು ಅವರು ಹೇಳಿದರು.

ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಯನ್ನು ಹಂತ ಹಂತವಾಗಿ ಈಡೇರಿಸುತ್ತ ಬರುತ್ತೇವೆ. ಅದು ನಮ್ಮ ಧರ್ಮ. ಸಮಾನ ನಾಗರಿಕ ಸಂಹಿತೆ ಈ ದೇಶವನ್ನು ಏಕತೆ. ಅಖಂಡತೆ ಕಡೆ ತೆಗೆದುಕೊಂಡು ಹೋಗುತ್ತದೆ. ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News