ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿಗೆ ಅನುದಾನ ಒದಗಿಸಲು ಪ್ರಯತ್ನ: ಸಚಿವ ಡಿ.ವಿ.ಸದಾನಂದ ಗೌಡ

Update: 2019-11-12 14:45 GMT

ಉಡುಪಿ, ನ.12: ಮಲ್ಪೆಯಂತೆ ಪಡುಕೆರೆ ಬೀಚ್‌ನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಯೋಜನೆ ತಯಾರಿಸಿ, ಶಾಸಕರ ನಿಯೋಗ ಕೇಂದ್ರ ಅಧಿವೇಶನದ ಸಂದರ್ಭದಲ್ಲಿ ದೆಹಲಿಗೆ ಬಂದರೆ ಪ್ರವಾಸೋದ್ಯಮ ಹಾಗೂ ಮೀನುಗಾರಿಕಾ ಸಚಿವರ ಜೊತೆ ಮತ್ತು ಅಂತಿಮವಾಗಿ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿಸಿ ಅನುದಾನ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಮಲ್ಪೆಬೀಚ್ ಅಭಿವೃದ್ದಿ ಸಮಿತಿ, ನಗರಸಭೆ, ಪ್ರವಾಸೋದ್ಯಮ ಇಲಾಖೆ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಇವುಗಳ ಸಹಯೋಗದೊಂದಿಗೆ ಮಲ್ಪೆಪಡುಕೆರೆಯಲ್ಲಿ ಮಂಗಳ ವಾರ ಹಮ್ಮಿಕೊಳ್ಳಲಾದ ಪಡುಕೆರೆ ಬೀಚ್ ಸ್ವಚ್ಛತಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕರ್ನಾಟಕದ 300 ಕಿ.ಮೀ. ಉದ್ದದ ಕರಾವಳಿಯನ್ನು ಕೋಸ್ಟಲ್ ಟೂರಿಸಂ ಮಾಡಲು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಕೇಂದ್ರ ನೀಡಲಿದೆ ಎಂದ ಅವರು, ಕೇರಳ ಮತ್ತು ಗೋವಾದಲ್ಲಿ ಕರಾವಳಿ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿಯಾಗಿದೆ. ಮುಂದೆ ಅದೇ ರೀತಿ ಪಡುಕೆರೆ, ಮಲ್ಪೆ ಬೀಚ್‌ನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗುವುದು. ಬೀಚ್ ಸ್ವಚ್ಛತೆಯಲ್ಲಿ ಉಡುಪಿಯನ್ನು ಇಡೀ ದೇಶಕ್ಕೆ ಮಾದರಿಯನ್ನಾಗಿ ಮಾಡಿದರೆ ಪ್ರವಾಸೋದ್ಯಮ ಕೂಡ ತನ್ನಷ್ಟಕ್ಕೆ ಪ್ರಗತಿಯಾಗುತ್ತದೆ ಎಂದು ಅವರು ತಿಳಿಸಿದರು.

ಸ್ವಚ್ಛ ಭಾರತದಂತಹ ಕಾರ್ಯಕ್ರಮಗಳು ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಪ್ರಕ್ರಿಯೆಯಾಗಬೇಕು. ದೇಶದಲ್ಲಿ ಶೇ.65ರಷ್ಟು ಮಂದಿ 35ವರ್ಷ ವಯಸ್ಸಿಗಿಂತ ಕೆಳಗಿನವರಿದ್ದಾರೆ. ಆದುದರಿಂದ ಭಾರತ ಇಡೀ ಪ್ರಪಂಚದಲ್ಲಿಯೇ ಅತಿ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ದೇಶವಾಗಿದೆ. ಯುವ ಜನತೆ ತಮ್ಮ ಶಕ್ತಿಯನ್ನು ಸದ್ಬಳಕೆ ಮಾಡಿದರೆ ಭಾರತ ವಿಶ್ವದಲ್ಲೇ ಯಶಸ್ವಿ ದೇಶವಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಲ್ಪೆ ಹಾಗೂ ಪಡುಕೆರೆ ಬೀಚ್ ಅಭಿವೃದ್ಧಿಗೆ ಸಂಬಂಧಿಸಿ ನಾವೆಲ್ಲ ಸೇರಿ ಕೇಂದ್ರದ ಗಮನಕ್ಕೆ ತಂದು ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು. ಹೊಸದಾಗಿ ನಿರ್ಮಾಣ ಆಗಿರುವ ಪಡುಕೆರೆ ಬೀಚ್‌ನ್ನು ಸಾಕಷ್ಟು ಅಭಿವೃದ್ಧಿ ಪಡಿಸುವ ಅಗತ್ಯ ಇದೆ ಎಂದು ಹೇಳಿದರು.

ಪಡುಬಿದ್ರೆ ಬೀಚ್ ಅಭಿವೃದ್ಧಿಗೆ ಕೇಂದ್ರ ಸರಕಾರದ ಬ್ಲೂಫ್ಲಾಗ್ ಯೋಜನೆ ಅಡಿಯಲ್ಲಿ ಎಂಟು ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದ್ದು, ಉಳಿದ ಎರಡು ಕೋಟಿ ರೂ. ಮುಂದೆ ಬಿಡುಗಡೆಗೊಳ್ಳಲಿದೆ. ಈ ಬ್ಲೂಫ್ಲಾಗ್ ಯೋಜನೆಯನ್ನು ಮಲ್ಪೆ ಪಡುಕೆರೆವರೆಗೆ ವಿಸ್ತರಣೆ ಮಾಡುವಂತೆ ಜಿಲ್ಲಾಧಿಕಾರಿಗಳು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದರೆ, ಈ ವಿಚಾರದಲ್ಲಿ ನಾವು ದೆಹಲಿಯಲ್ಲಿ ಪ್ರಯತ್ನ ಮಾುತ್ತೇವೆ ಎಂದು ಅವರು ತಿಳಿಸಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾಧಿಕಾರಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ರಾವ್, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ನಗರಸಭೆ ಸದಸೆ್ಯ ಎಡ್ಲಿನ್ ಕರ್ಕಡ ಉಪಸ್ಥಿತರಿದ್ದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಭಿಯಾನದ ಕೊನೆಯವರೆಗೂ ನಿಂತ ಸಚಿವರು!
ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಪಡುಕೆರೆ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಸಚಿವ ಡಿ.ವಿ.ಸದಾನಂದ ಗೌಡ ಕೊನೆಯವರೆಗೂ ಬೀಚ್‌ನಲ್ಲಿದ್ದ ಕಸವನ್ನು ಹೆಕ್ಕಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸುಮಾರು ಎರಡು ಕಿ.ಮೀ. ಉದ್ದದ ಪಡುಕೆರೆ ಬೀಚ್‌ನ್ನು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಮತ್ತು ಹಿಟಾಚಿ ಹಾಗೂ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಯಿತು. ಈ ಅಭಿಯಾನದಲ್ಲಿ ಉಡುಪಿ ನಗರದ ಸುಮಾರು 12 ಶಾಲಾ ಕಾಲೇಜುಗಳ ಒಟ್ಟು 1500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದೇ ರೀತಿ ಸ್ಕೌಟ್ ಆ್ಯಂಡ್ ಗೈಡ್ ವಿದ್ಯಾರ್ಥಿಗಳು ಕೂಡ ಇದ್ದರು. ಸುಮಾರು ಮೂರು ಟ್ರಕ್ ಕಸವನ್ನು ವಿಲೇವಾರಿ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News