ಮಳೆ ನೀರಿನ ಕೊಯ್ಲು ಇಂದಿನ ಅನಿವಾರ್ಯತೆ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

Update: 2019-11-12 15:42 GMT

ಉಡುಪಿ, ನ.12: ಯುವಕರು ಕಡಿಮೆ ಅಂದರೂ ವರ್ಷಕ್ಕೆ ಐದು ಗಿಡಗಳನ್ನಾದರೂ ನೆಟ್ಟು ಅವುಗಳ ಪೋಷಣೆ ಮಾಡುವುದು ಇಂದು ಅನಿವಾರ್ಯ ವಾಗಿದೆ. ಹೀಗೆ ಮಾಡುವುದರಿಂದ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮಿಂದಲೇ ನಾಶವಾಗುತ್ತಿರುವ ಕಾಡನ್ನು ಮತ್ತೆ ಬೆಳೆಸಲು ಮಹತ್ವದ ಹೆಜ್ಜೆಯನ್ನು ಇಟ್ಟಂತಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಸೋಮವಾರ, ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ಮಿಲಾಗ್ರಿಸ್ ಪಿಯು ಕಾಲೇಜು ಕಲ್ಯಾಣಪುರ ಹಾಗೂ ಯುವಕ ವೃಂದ ಗಂಗನಾಡು ಬೈಂದೂರು ಇವರ ಸಹಯೋಗದಲ್ಲಿ ನೆಹರು ಯುವ ಕೇಂದ್ರ ಉಡುಪಿ ಇವರು ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಮಳೆ ನೀರಿನ ಕೊಯ್ಲು ಮತ್ತು ನೀರಿನ ಸಂರಕ್ಷಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಎಂಬ ವಿಷಯಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಮಾಡಿ ಅದರಿಂದ ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ತಮ್ಮ ಮನೆಯ ಕೈತೋಟಕ್ಕೆ, ಗಿಡ ಮರಗಳಿಗೆ ಉಪಯೋಗಿಸಿದರೆ ಅದರಿಂದ ಉತ್ಪತ್ತಿಯಾಗುವ ರಾಸಾಯನಿಕ ಅಂಶವಿಲ್ಲದ ತಾಜಾ ತರಕಾರಿ ಗಳನ್ನು, ಹಣ್ಣುಹಂಪಲುಗಳನ್ನು ಉಪಯೋಗಿಸುವುದರಿಂದ ಉತ್ತಮ ಆರೋಗ್ಯ ವಂತರಾಗಿ ಇರಬಹುದು ಮತ್ತು ನಮ್ಮ ಪರಿಸರವನ್ನು ತ್ಯಾಜ್ಯ ಮುಕ್ತವಾಗಿ ಇರಿಸಬಹುದು ಜಿ.ಜಗದೀಶ್ ಕಿವಿಮಾತು ಹೇಳಿದರು.

ಜಲ ಸಂರಕ್ಷಣೆಯನ್ನು ಸಾರಿ ಹೇಳುವ ಮಳೆ ನೀರಿನೊಂದಿಗೆ ಅನುಸಂಧಾನ ಎಂಬ ಚಿನ್ನೆ/ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಮಳೆ ನೀರಿನ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಾ, ಕಳೆದ -ಋತುವಿನಲ್ಲಿ ಉಡುಪಿ ಜಿಲ್ಲೆ ಅನುಭವಿಸಿದ ನೀರಿನ ಬರಗಾಲ, ಜನತೆ ಅನುಭವಿಸಿದ ಭವಣೆ, ಇದಕ್ಕೆಲ್ಲಾ ಏನು ಕಾರಣ ಎಂಬ ವಿಷಯದ ಬಗ್ಗೆ ಯುವಜನರೊಂದಿಗೆ ಸಂವಾದಿಸಿದ ಅವರು, ಕಳೆದ ಬಾರಿ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪಾವತಿಗಾಗಿ ಜಿಲ್ಲಾಡಳಿತ, ನಗರಸಭೆ ಹಾಗೂ ಸ್ಥಳೀಯ ಆಡಳಿತ ಕೋಟ್ಯಾಂತರ ರೂ. ಖರ್ಚುಮಾಡಿದೆ ಎಂದರು.

ನಾವು ಮಳೆ ನೀರನ್ನು ಸೂಕ್ತ ವಿಧಾನಗಳ ಮೂಲಕ ಉಳಿಸಿಕೊಂಡಿದ್ದರೆ, ಕೆರೆ ಕುಂಟೆ, ಮದಗಗಳ ಹೂಳನ್ನು ಸೂಕ್ತ ಕಾಲದಲ್ಲಿ ತೆಗೆದಿದ್ದರೆ, ಇನ್ನೂ ಹೆಚ್ಚು ಮಳೆ ನೀರು ಶೇಖರಿಸಿಕೊಂಡು ಕಡುಬೇಸಿಗೆಯಲ್ಲಿ ನೀರಿನ ಬವಣೆಯನ್ನು ನೀಗಿಸಬಹುದಾಗಿತ್ತು. ಅಷ್ಟೇ ಅಲ್ಲದೇ, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮಳೆ ನೀರಿನ ಕೊಯ್ಲಿನ ವಿಧಾನಗಳನ್ನು ಅಳವಡಿಸಿ, ತೆರೆದ ಬಾವಿ, ಕೊಳವೆ ಬಾವಿ, ಮಳೆ ನೀರು ಶೇಖರಣಾ ಘಟಕಗಳನ್ನು ರೂಪಿಸಿಕೊಂಡಿದ್ದರೆ ಅಂತರ್ಜಲದ ಮಟ್ಟ ಮೇಲೇರುತ್ತಿತ್ತು ಎಂದು ವಿವರಿಸಿದರು.

ಉಡುಪಿಯನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ/ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ನೀಲ ನಕ್ಷೆದ ತಯಾರಿ ಈಗಾಗಲೆ ನಡೆದಿದ್ದು, ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಹಾಗೂ ಪ್ರವಾಸೋದ್ಯಮ ಪರಿಣಿತರೊಂದಿಗೆ ಚರ್ಚಿಸಿ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದರು.

ಈ ವರ್ಷದ ಅತ್ಯುತ್ತಮ ಯುವಕ ಮಂಡಳ ಪ್ರಶಸ್ತಿಗೆ ಆಯ್ಕೆಯಾದ ಕಾಪು ತಾಲೂಕು ಹೆಜಮಾಡಿ ಯುವಕ/ಯುವತಿ ವೃಂದಕ್ಕೆ ಜಿಲ್ಲಾಧಿಕಾರಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವರ್ಷದ ಅತ್ಯುತ್ತಮ ಯುವಕ ಮಂಡಳ ಪ್ರಶಸ್ತಿಗೆ ಆಯ್ಕೆಯಾದ ಕಾಪು ತಾಲೂಕು ಹೆಜಮಾಡಿ ಯುವಕ/ಯುವತಿ ವೃಂದಕ್ಕೆ ಜಿಲ್ಲಾಧಿಕಾರಿ ಪ್ರಶಸ್ತಿ ಪ್ರದಾನ ಮಾಡಿದರು. ಮಿಲಾಗ್ರಿಸ್ ಸಮೂಹ ಸಂಸ್ಥೆಗಳ ಸಂಚಾಲಕ ಡಾ. ಲಾರೆನ್ಸ್ ಸಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ರಾಜ್ ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿಯ ಬಗ್ಗೆ ತಿಳಿಸಿದರು. ಜೋಸೆಫ್ ಜಿ.ಎಂ.ರೆಬೆಲ್ಲೊ ಮಳೆ ನೀರಿನ ಕೊಯ್ಲು ಮತ್ತು ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ಮಿಲಾಗ್ರಿಸ್ ಕಾಲೇಜಿನ ಪದವಿ ಮತ್ತು ಪದವಿ ಪೂರ್ವ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವಾ ಹಾಗೂ ಸವಿತ ಕುಮಾರಿ ಉಪಸ್ಥಿತರಿದ್ದರು.ನೆಹರು ಯುವ ಕೇಂದ್ರದ ಜಿಲ್ಲಾ ಯುವಸಮನ್ವಯ ಅಧಿಕಾರಿ ವಿಲ್ಪ್ರೇಡ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಜೋಸೆಪ್ ಜಿ ಎಂ ರೆಬೆಲ್ಲೊ ವಂದಿಸಿದರು. ಮಿಲಾಗ್ರಿಸ್ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿನಂದನ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News