ಧರ್ಮಸ್ಥಳ: ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲೊಂದು ವಿನೂತನ ಕಾರ್ಯಕ್ರಮ

Update: 2019-11-12 15:55 GMT

ಬೆಳ್ತಂಗಡಿ: ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂಗಳವಾರ 1969ರಲ್ಲಿ ಶಾಲೆಯಲ್ಲಿ ಎಸೆಸೆಲ್ಸಿ ವರೆಗೆ ಶಿಕ್ಷಣ ಪೂರೈಸಿದ ಪ್ರಥಮ ತಂಡದ ವಿದ್ಯಾರ್ಥಿಗಳೆಲ್ಲ ಸಂಘಟಿತರಾಗಿ ತಮ್ಮ ಶಾಲಾ ಜೀವನದ ಸವಿನೆನಪುಗಳ ಸ್ಮರಣೆಯೊಂದಿಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆಯವರನ್ನು ಹಾಗೂ ಗುರುಗಳನ್ನು ಗೌರವಿಸಿ ಅಭಿನಂದಿಸಿದರು.

ತಮಗೆ ಕಲಿಸಿದ ಗುರುಗಳಾದ ಕೆ.ಆರ್.ರೈ, ರಾಮಕೃಷ್ಣ ಉಡುಪ, ಎಸ್.ಬಿ. ನರೇಂದ್ರಕುಮಾರ್, ಹರಿದಾಸ ಗಾಂಭೀರ, ಅರುಂಧತಿರಾವ್ ಮತ್ತು ಲೀಲಾವತಿ ಹಾಗೂ ಜವಾನರಾಗಿ ಸೇವೆ ಸಲ್ಲಿಸಿದ ರಾಮಗೌಡ ಮತ್ತು ಸುಂದರದೇವಾಡಿಗ ಅವರನ್ನು ಗೌರವಿಸಿದರು.

ಹಿರಿಯ ವಿದ್ಯಾರ್ಥಿಗಳ ಪರವಾಗಿ ನಿವೃತ್ತ ಶಿಕ್ಷಕರನ್ನು ಹಾಗೂ ನೌಕರರನ್ನು ಸನ್ಮಾನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಕ್ಷಣ ಪ್ರೇಮಿಯಾಗಿದ್ದ ತಮ್ಮ ತೀರ್ಥರೂಪರಾದ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರೌಢಶಾಲಾ ಶಿಕ್ಷಣ ನೀಡುವುದಕ್ಕಾಗಿ ಧರ್ಮಸ್ಥಳದಲ್ಲಿ 1966ರಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಅಂದಿನ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಚಿಂತೆ ಇರಲಿಲ್ಲ. ಮಾನಸಿಕ ಒತ್ತಡ ಇರಲಿಲ್ಲ. ಹಾಗಾಗಿ ನಾಟಕ, ಯಕ್ಷಗಾನ ಚಿತ್ರಕಲೆ, ಸಾಹಿತ್ಯ, ಸಂಗೀತದಲ್ಲಿ ವಿಶೇಷ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಆದರೆ ಈಗಿನ ವಿದ್ಯಾರ್ಥಿಗಳಿಗೆ ಡಾಕ್ಟರ್, ಎಂಜಿನಿಯರಿಂಗ್ ಆಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಅಂಕಗಳಿಕೆ ಹಾಗೂ ಪರೀಕ್ಷೆಯೇ ಮುಖ್ಯವಾಗಿದೆ. ಮಾನಸಿಕ ಒತ್ತಡ ಹೆಚ್ಚಾಗಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಮಾತನಾಡಿ, ಸಮಾಜದ ಸಭ್ಯ ಸುಸಂಸ್ಕೃತ ನಾಗರಿಕರನ್ನು ರೂಪಿಸುವುದೇ ಶಿಕ್ಷಣದ ಗುರಿಯಾಗಿದೆ. ಪ್ರಾಕ್ತನ ವಿದ್ಯಾರ್ಥಿಗಳು ತಮ್ಮ ಬದುಕಿಗೆ ದಾರಿದೀಪವಾದ ಶಿಕ್ಷಣ ಸಂಸ್ಥೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮಧುರ ಬಾಂಧವ್ಯ ಹೊಂದಿರಬೇಕು ಎಂದು ಸಲಹೆ ನೀಡಿದರು.

ಪ್ರಾಕ್ತನ ವಿದ್ಯಾರ್ಥಿಗಳು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಿದರು.ನಮೂಡಬಿಢ ಉದ್ಯಮಿ ಶ್ರೀಪತಿ ಭಟ್ ಮತ್ತು ಶಾಲಾ ಮುಖ್ಯೋಪಾಧ್ಯಾಯ ಬಿ.ಜನಾರ್ಧನ ತೋಳ್ಪಾಡಿತ್ತಾಯ ಶುಭಾಶಂಸನೆ ಮಾಡಿದರು. ಕೆ.ಆರ್. ರೈ ಮತ್ತು ಅರುಂಧತಿ ರಾವ್ ಶಾಲೆಯಲ್ಲಿ ತಮ್ಮಅನುಭವವನ್ನು ವಿವರಿಸಿದರು.

ಪ್ರಾಕ್ತನ ವಿದ್ಯಾರ್ಥಿಗಳ ಪರವಾಗಿ ಬಿ. ಸೀತಾರಾಮ ತೋಳ್ಪಾಡಿತ್ತಾಯ , ವಿಶ್ವನಾಥ ಶೆಟ್ಟಿ, ಸುಜಲಾ ಭಟ್ ಮತ್ತು ವಿಷ್ಣುಮೂರ್ತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಗೀತ ಶಿಕ್ಷಕಿ ಲೀಲಾರುಕ್ಮಿಣಿ ಅವರು ಕೆ.ಆರ್.ರೈ ರಚಿಸಿದ ಕವನವನ್ನು ಸುಶ್ರಾವ್ಯವಾಗಿ ಹಾಡಿದರು. ಜಯರಾಮ ಕುದ್ರೆತ್ತಾಯಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ಹಾಡಿದರು. ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಶ್ಯಾಮ ಭಟ್‍ ಧನ್ಯವಾದವಿತ್ತರು. ಶಿಕ್ಷಕರಾದ ಯುವರಾಜ್ ಮತ್ತು ಧನ್ಯಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News