ಬೆಳ್ತಂಗಡಿ: ಪ.ಜಾತಿ, ಪ.ಪಂಗಡದ ಕುಂದುಕೊರತೆ ಸಭೆ

Update: 2019-11-12 16:09 GMT

ಬೆಳ್ತಂಗಡಿ: ವೀಲ್ ನಾಮೆಯ ಮೂಲಕವಾಗಿ ಹಾಗೂ ಸಾಮನ್ಯ ಜಿ.ಪಿ.ಎ ಮೂಲಕವಾಗಿ ದಲಿರ ಜಮೀನನ್ನು ಕಬಳಿಸುವ ಕಾರ್ಯ ತಲೂಕಿನಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು ಇದರ ಬಗ್ಗೆ ಸಮಗ್ರವಾದ ತನಿಖೆ ನಡಸಿ ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಒತ್ತಯಿಸಲಾಯಿತು. 

ಬೆಳ್ತಂಗಡಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಸಂಜೀವ ಆರ್ ಇದೊಂದು ವ್ಯವಸ್ಥಿತ ಧಾಳವಾಗಿದೆ. ತಾಲೂಕಿನಲ್ಲಿ ಇಂತಹ  ಪ್ರಕರಣಗಳು ಸಾಕಷ್ಟು ಇದೆ. ಅತ್ಯಂತ ವ್ಯವಸ್ಥಿತವಾಗಿ ದಲಿತರ ಜಮೀನನ್ನು ಕಬಳಿಸುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಸಭೆಯಲ್ಲಿದ್ದ ಚಂದು ಎಲ್, ಬಿ ಕೆ ವಸಂತ ಹಾಗೂ ಇತರೆ ಹೆಚ್ಚಿನ ಸದಸ್ಯರು ಧ್ವನಿಗೂಡಿಸಿ ತಾಲೂಕಿನಲ್ಲಿ ನಡೆದಿರುವ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ್ ಅವರು ತಾಲೂಕಿನ ಕಲ್ಲೇರಿಯಲ್ಲಿ ದಲಿತರ ಜಮೀನನ್ನು ಅತ್ಯಂತ ವ್ಯವಸ್ಥಿತವಾಗಿ ಕಬಳಿಸಲಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿ ತಹಶೀಲ್ದಾರರು ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹಾಗೂ ಬೆಳ್ತಂಗಡಿ ಸಬ್ ರಿಜಿಸ್ಟಾರ್ ಕಚೇರಿಗೆ ದಲಿರ ಭೂಮಿಯ ಪರಾಬಾರೆಯ ಸಂದರ್ಭದಲ್ಲಿ ಸೂಕ್ತವಾದ ಕ್ರಮಗಳನ್ನು ವಹಿಸುವಂತೆ ಸೂಚಿಸುವದಾಗಿ ತಿಳಿಸಿದರು.

ತಾಲೂಕಿನಲ್ಲಿ ಡಿಸಿ ಮನ್ನಾ ಜಮೀನು ನೀಡಿಕೆಯಲ್ಲಿ ಆಗಿರುವ ಅನ್ಯಾಯದ ಬಗ್ಗೆ ಶೇಖರ ಲಾಯಿಲ ಗಮನ ಸೆಳೆದರು. ಎಲ್ಲೆಡೆ ದಲಿತರಿಗೆ ಮೀಸಲಿರಿಸಲಾಗಿರುವ ಜಮೀನು ಅತಿಕ್ರಮಣವಾಗಿದೆ. ಆದರೆ ಅದರ ತೆರವಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಡಿಸಿ ಮನ್ನಾ  ಜಾಗ ವಿತರಣೆಗಾಗಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆಯಾದರೂ ಈ ವರೆಗೆ ಅದರ ಸಭೆಯೇ ನಡೆದಿಲ್ಲ. ದಲಿತರಿಗೆ ಜಾಗ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ ಆರೋಪಿಸಿದರು. ಈ ಬಗ್ಗೆ ಸಭೆಯಲ್ಲಿ ಎಲ್ಲರೂ ಧ್ವನಿಗೂಡಿಸಿದರು ಇದಕ್ಕುತ್ತರಿಸಿದ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಬೆಳ್ತಂಗಡಿ ಪಟ್ಟಣ ಪಂಚಾಯತಿನಲ್ಲಿ ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆಯಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ. ದಲಿತರಿಗೆ ಮೀಸಲಿರಿಸಲಾಗಿರುವ ಅಂಗಡಿಗಳು ಇತರರ ಪಾಲಾಗುತ್ತಿದೆ ಇದು ನಿಲ್ಲಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಈ ಬಗ್ಗೆ ಮಾತನಾಡಿದ ಶೇಖರ ಕುಕ್ಕೇಡಿ, ಬಿಕೆ ವಸಂತ ಹಾಗೂ ಇತರರು ಸಾಮಾನ್ಯರಿಗಿರುವ ಇಎಂಡಿ ಯನ್ನು ದಲಿತರಿಗೂ ವಿಧಿಸಿ ಯಾರೂ ಅಂಗಡಿಗಳನ್ನು ಪಡೆಯದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಶಿರ್ಲಾಲಿನಿಂದ ಬರುವ ಸರಕಾರಿ ಬಸ್ಸುಗಳು ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಬಾರದಿರುವುದರಿಂದ ಸಮಸ್ಯೆಗಳಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. 

ಸಭೆಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾ. ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಂ, ತಾಲೂಕು ಸಮಾಜಕಲ್ಯಾಣಾಧಿಕಾರಿ ಹೇಮಚಂದ್ರ, ಜಿ.ಪಂ ಸದಸ್ಯರುಗಳಾದ ಶೇಖರ ಕುಕ್ಕೇಡಿ, ಕೊರಗಪ್ಪ ನಾಯ್ಕ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವ ನಿವಾಸಿಗಳಿಗೆ ಇನ್ನೂ ವಿಧ್ಯುತ್ ಸಂಪರ್ಕ ಸರಿಯಾಗಿ ತಲುಪಿಲ್ಲ. ಅವರು ಇನ್ನೂ ಸೀಮೆ ಎಣ್ಣೆ ದೀಪದ ಅಡಿಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಆದರೆ ಇದೀಗ ಸರಕಾರದ ನೀತಿಯಿಂದಾಗಿ ಅವರಿಗೆ ಸೀಮೆ ಎಣ್ಣೆಯೂ ಇಲ್ಲವಾಗಿದ, ಇದರಿಂದಾಗಿ ಈ ಕುಟುಂಬಗಳು ಕತ್ತಲೆಯಲ್ಲಿ ವಾಸಿಸುವಂತಾಗಿದೆ. ಸರಕಾರ ಕೂಡಲೇ ಇವರಿಗೆ ಸೀಮೆ ಎಣ್ಣೆಯ ವ್ಯವಸ್ಥೆಯನ್ನು ಮಾಡಬೇಕು 
ಶೇಖರ ಲಾಯಿಲ, ದಲಿತ ಮುಖಂಡರು   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News