ಕರ್ಜೆ ಶ್ರೇಯಸ್ ಸಾವಿನ ಪ್ರಕರಣ: ಮೃತರ ಮನೆಗೆ ಎಸ್ಪಿ ಭೇಟಿ

Update: 2019-11-12 16:48 GMT

ಬ್ರಹ್ಮಾವರ, ನ.12: ಕರ್ಜೆ ಸಮೀಪದ ಹೊಸೂರು ಗ್ರಾಮದ ಹರಾವು ಸಮೀಪದ ಮಡಿಸಾಲು ಹೊಳೆಯಲ್ಲಿ ತೋಟೆ(ಸ್ಪೋಟಕ) ಹಾಕಿ ಮೀನು ಹಿಡಿಯುವ ವೇಳೆ ಅನುಮಾನಾಸ್ಪದವಾಗಿ ಮೃತಪಟ್ಟ ಕರ್ಜೆ ಕುರ್ಪಾಡಿಯ ಶ್ರೇಯಸ್(19) ಎಂಬವರ ಮನೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಇಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ತಮ್ಮ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೃತರ ತಾಯಿ ಶೋಭಾ ಹಾಗೂ ತಂದೆ ಸುರೇಶ್ ಸೇರ್ವೆಗಾರ್ ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಎಸ್ಪಿಯವರನ್ನು ಮನವಿ ಮಾಡಿದರು. ಎಸ್ಪಿಯವರು ಮೃತರ ಹೆತ್ತವರಿಂದ ಘಟನೆಗೆ ಸಂಬಂಧಿಸಿ ಮಾಹಿತಿಗಳನ್ನು ಪಡೆದುಕೊಂಡರು.

ಬಳಿಕ ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೇಲ್ನೋಟಕ್ಕೆ ಶ್ರೇಯಸ್ ನೀರಿನಲ್ಲಿ ಮುಳುಗಿ ಮೃತಪಟ್ಟಿರುವಂತೆ ಕಂಡುಬಂದರೂ ಕೆಲವೊಂದು ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪ್ರವೇಶ ಮಾಡಿದರೂ ನಾವು ನಮ್ಮದೇ ರೀತಿಯಲ್ಲಿ ತನಿಖೆ ನಡೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ವಿಭಾಗದ ಡಿವೈಎಸ್ಪಿ ಜೈಶಂಕರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಉಪಸ್ಥಿತರಿದ್ದರು.

ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ರಘುಪತಿ ಭಟ್
ಶ್ರೇಯಸ್‌ನನ್ನು ಬಿಜೆಪಿ ಕಾರ್ಯಕರ್ತರು ಕೊಲೆ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಈ ಪ್ರಕರಣ ಇದೀಗ ತನಿಖೆಯ ಹಂತದಲ್ಲಿದೆ. ಮೀನು ಹಿಡಿಯಲು ಸ್ನೇಹಿತರೊಂದಿಗೆ ಹೋದ ಸಂದರ್ಭ ಶ್ರೇಯಸ್ ಮೃತಪಟ್ಟಿದ್ದಾನೆ. ಆದರೆ ಈಗ ನೀಡಿರುವ ದೂರಿನ ಪ್ರಕಾರ ಮೀನು ಹಿಡಿಯಲು ತೋಟೆ ಹಾಕಿದ್ದು, ಸ್ಪೋಟದಿಂದ ಆತ ಮೃತಪಟ್ಟಿದ್ದಾನೆ ಎಂಬುದು. ಇದು ತನಿಖೆಯಿಂದ ಹೊರಬರಲಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟದಿಂದಾಗಿ ಶ್ರೇಯಸ್ ಮೃತಪಟ್ಟಿರುವುದಾಗಿ ವರದಿ ಬಂದರೆ ಬಿಜೆಪಿ ಇರಲಿ ಅಥವಾ ಬೇರೆ ಯಾರೆ ಇರಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬಹುದು. ಇದರಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News