ಉಡುಪಿ: ಎಸ್ಸೈ ಅಮಾನತು ಆದೇಶ ವಾಪಾಸ್ಸು ಪಡೆಯಲು ಸಂಘಟನೆಗಳ ಆಗ್ರಹ

Update: 2019-11-12 17:06 GMT

ಉಡುಪಿ, ನ.12: ಕಳೆದ ಮೂರು ವರ್ಷಗಳಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ನಗರ ಠಾಣಾ ಎಸ್ಸೈ ಅನಂತ ಪದ್ಮನಾಭ ಅವರನ್ನು ವಿನಾಕಾರಣ ಅಮಾನತು ಮಾಡಿರುವುದು ಖಂಡನೀಯ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಸಮಾಜದಲ್ಲಿ ಸಂಘರ್ಷಕ್ಕೆ ಅವಕಾಶ ನೀಡದೆ ಸೌಹಾರ್ದತೆಗಾಗಿ ಕೆಲಸ ಮಾಡಿದ ಎಸ್ಸೈಗೆ ಈ ರೀತಿ ಶಿಕ್ಷೆ ನೀಡಿರುವುದು ಸರಿಯಲ್ಲ. ಈ ಕುರಿತು ಗೃಹ ಸಚಿವರಿಗೆ ಮತ್ತು ಐಜಿಯವರಿಗೆ ತಿಳಿಸಿದ್ದೇನೆ. ಆದುದರಿಂದ ಎಸ್ಪಿಯವರು ತಕ್ಷಣವೇ ಎಸ್ಸೈಯವರ ಅಮಾನತು ಆದೇಶವನ್ನು ವಾಪಾಸ್ಸು ತೆಗೆದು ಉಡುಪಿ ಯಲ್ಲಿಯೇ ಅವರಿಗೆ ಕರ್ತವ್ಯ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ದಸಂಸ ಮಹಾ ಒಕ್ಕೂಟ: ಇತ್ತೀಚೆಗೆ ಉಡುಪಿ ಭುಜಂಗ ಪಾರ್ಕ್‌ನಲ್ಲಿ ಸಣ್ಣ ಪ್ರಕರಣವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲವೆಂಬ ಕಾರಣದಿಂದ ಠಾಣಾಧಿಕಾರಿ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸಿದೆ.

ಆದುದರಿಂದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಠಾಣಾಧಿಕಾರಿಯ ಅಮಾನತು ಆದೇಶವನ್ನು ರದ್ದುಗೊಳಿಸಿ, ಅದೇ ಸ್ಥಾನಕ್ಕೆ ಪುನರ್‌ನೇಮಕ ಮಾಡಬೇಕು. ಇಲ್ಲದಿದ್ದರೆ ಎಸ್ಪಿಯ ದಲಿತ ವಿರೋಧಿ ನೀತಿ ಯನ್ನು ಖಂಡಿಸಿ ಜಿಲ್ಲಾಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಸುಂದರ್ ಮಾಸ್ತರ್, ಉದಯ ಕುಮಾರ್ ತಲ್ಲೂರು, ರಮೇಶ್ ಕೋಟ್ಯಾನ್ ಎಸ್ಪಿಯವರಿಗೆ ಇಂದು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಜಯನ್ ಮಲ್ಪೆ: ನಗರ ಠಾಣೆಯ ಎಸ್ಸೈ ಅನಂತಪದ್ಮನಾಭ ಅವರನ್ನು ಕ್ಷುಲಕ ಕಾರಣಕ್ಕೆ ಅಮಾನತು ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ವಕ್ತಾರ ಜಯನ್ ಮಲ್ಪೆ, ದಕ್ಷ ಅಧಿಕಾರಿಯ ಅಮಾನತು ಆದೇಶ ಹಿಂಪಡೆದು ಉಡುಪಿ ನಗರ ಠಾಣೆಯಲ್ಲಿಯೇ ಮುಂದುವರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ: ಕರ್ತವ್ಯಲೋಪದ ಆರೋಪ ಹೊರಿಸಿ ಎಸ್ಸೈ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಅವರ ಅಮಾನತು ಆದೇಶವನ್ನು ಎರಡು ದಿನಗಳೊಳಗೆ ರದ್ದುಗೊಳಿಸಿದೇ ಇದ್ದಲ್ಲಿ ನಗರ ಠಾಣೆಯ ಎದುರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ವಿಎಚ್‌ಪಿ- ಶ್ರೀರಾಮಸೇನೆ: ನಗರ ಠಾಣಾ ಎಸ್ಸೈ ಅನಂತ ಪದ್ಮನಾಭ ಅವರ ಅಮಾನತು ಆದೇಶವನ್ನು ಕೂಡಲೇ ವಾಪಾಸ್ಸು ಪಡೆಯುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ - ಬಜರಂಗದಳ ಉಡುಪಿ ಜಿಲ್ಲೆ ಮತ್ತು ಶ್ರೀರಾಮಸೇನೆ ಇಂದು ಉಡುಪಿ ಎಸ್ಪಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News