ಅಚ್ಲಾಡಿಯಲ್ಲಿ ನಾಡಿಗೆ ಬಂದ ಗಂಡು ಚಿರತೆ ಸೆರೆ

Update: 2019-11-12 17:13 GMT

ಕೋಟ, ನ.12: ಬೇಟೆಗಾಗಿ ನಾಡಿಗೆ ಬಂದ ಚಿರತೆಯೊಂದನ್ನು ಅರಣ್ಯ ಇಲಾಖೆಯವರು ಇಂದು ಬೆಳಗ್ಗೆ ಕೋಟ ಸಮೀಪದ ಮಧುವನ ಅಚ್ಲಾಡಿ ಎಂಬಲ್ಲಿ ಸೆರೆ ಹಿಡಿದಿದ್ದಾರೆ.

ಬೆಳಗ್ಗೆ 9ಗಂಟೆ ಸುಮಾರಿಗೆ ಅಚ್ಲಾಡಿ ಹಾಡಿಯಲ್ಲಿ ಚಿರತೆಯನ್ನು ಮಹಿಳೆಯೊಬ್ಬರು ನೋಡಿದ್ದು, ಮಾಹಿತಿ ತಿಳಿದ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಇದರಿಂದ ಬೆದರಿದ ಚಿರತೆ ಅಲ್ಲೇ ಸಮೀಪ ಇದ್ದ ಸಣ್ಣ ಮೋರಿಯೊಳಗೆ ನುಗ್ಗಿ ಕುಳಿತುಕೊಂಡಿತು.

ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಅದರಂತೆ ಬೆಳಗ್ಗೆ 9:30ರ ಸುಮಾರಿಗೆ ಬೋನಿನೊಂದಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಕಾರ್ಯಾಚರಣೆಗೆ ಮುಂದಾದರು. ಮೋರಿಯ ಒಂದು ಬದಿಯಲ್ಲಿ ಬೋನನ್ನು ಇರಿಸಿ, ಇನ್ನೊಂದು ಬದಿಯಿಂದ ಚಿರತೆಯನ್ನು ಹೆದರಿಸಿ ಓಡಿಸಲಾಯಿತು.

ಹೀಗೆ ಹೊರಗೆ ಬಂದ ಚಿರತೆಯು ಬೋನಿನೊಳಗೆ ಸೆರೆಯಾಯಿತು. 5-6 ವರ್ಷ ಪ್ರಾಯ ಗಂಡು ಚಿರತೆ ಆರೋಗ್ಯವಾಗಿದ್ದು, ಬಳಿಕ ಇದನ್ನು ಸಾಬರ ಕಟ್ಟೆ ಪಶುವೈದ್ಯಾಧಿಕಾರಿಯವರಲ್ಲಿ ಪರೀಕ್ಷಿಸಿ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದಲ್ಲಿ ಬಿಡಲಾಯಿತು.

ಕಳೆದ ಆರು ತಿಂಗಳಿನಿಂದ ಅಚ್ಲಾಡಿ, ವಡ್ಡರ್ಸೆ, ಬನ್ನಾಡಿ ಗ್ರಾಮಗಳಲ್ಲಿ ಚಿರತೆ ಹಾವಳಿ ಇರುವ ಬಗ್ಗೆ ಸ್ಥಳೀಯರು ಗ್ರಾಮಸಭೆಗಳಲ್ಲಿ ದೂರುತ್ತಿದ್ದರು. ಅದರಂತೆ ಅರಣ್ಯ ಇಲಾಖೆಯವರು ವಡ್ಡರ್ಸೆಯಲ್ಲಿ ಚಿರತೆ ಸೆರೆಗೆ ಬೋನು ಇರಿಸಿದ್ದರು. ಆದರೆ ಈವರೆಗೆ ಚಿರತೆ ಸೆರೆಯಾಗಿರಲಿಲ್ಲ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಉಪವಲಯ ಅರಣ್ಯಾಧಿಕಾರಿ ಜೀವನ್ ಶೆಟ್ಟಿ, ಉಡುಪಿ ಉಪವಲಯ ಅರಣ್ಯಾಧಿಕಾರಿ ಗುರುರಾಜ್, ಅರಣ್ಯ ರಕ್ಷಕರಾದ ಶಿವಪ್ಪ ನಾಯ್ಕ, ಸುರೇಶ್, ದೇವರಾಜ ಪಾಣ, ಅರಣ್ಯ ವೀಕ್ಷಕ ಪರಶುರಾಮ ಮೇಟಿ, ಚಾಲಕ ಜಾಯ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News