ಕಾರ್ಕಳಕ್ಕೆ ಶೀಘ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ: ಸಚಿವ ಶ್ರೀರಾಮುಲು

Update: 2019-11-12 17:38 GMT

ಕಾರ್ಕಳ : ಕಾರ್ಕಳಕ್ಕೆ ಶೀಘ್ರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ರಚನೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಗ್ರೀನ್ ಸಿಗ್ನಲ್ ನೀಡಿದ್ದು, ಜತೆಗೆ ಎರಡು ಹೊಸ ತುರ್ತು ಚಿಕಿತ್ಸಾ ವಾಹನ ಹಾಗೂ ಮೂರು ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ ತಲಾ ಹತ್ತು ಲಕ್ಷ ರೂ. ನೀಡುವ ಕುರಿತು ಘೋಷಿಸಿದ್ದಾರೆ.

ಅವರು ಮಂಗಳವಾರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲೆ ಹಾಗೂ ಇಂಜಿನಿಯರಿಂಗ್ ಉಪವಿಭಾಗ ಮಂಗಳೂರು ಇದರ 100 ಹಾಸಿಗೆಗಳ ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೂತನ 8.5 ಕೋಟಿ ರೂ. ವೆಚ್ಚದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಸಚಿವರು ಸರಕಾರಿ ಆಸ್ಪತ್ರೆಗಳ ಸುಧಾರಣೆಗಾಗಿ ಮಂತ್ರಿಗಳು ಪ್ರವಾಸಿ ಬಂಗಲೆ, ರೆಸಾರ್ಟ್ ಗಳಲ್ಲಿ ವ್ತಾಸ್ತವ್ಯ ಹೂಡದೆ ಸರಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯವಿದ್ದು ಆಸ್ಪತ್ರೆಗಳ ಸ್ಥಿತಿಗತಿ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು.

ವೈದ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಾಗಿ ಆಸ್ಪತ್ರೆ ವಠಾರದಲ್ಲಿ ಸಿಸಿ ಕ್ಯಾಮರಾ, ಪೊಲೀಸ್ ಸಿಬ್ಬಂದಿಗಳನ್ನು, ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಸ್ವಚ್ಚತೆ ವಿಚಾರದಲ್ಲಿ ಯಾವುದೇ ದೂರುಗಳು ಬಂದಲ್ಲಿ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ವೈದ್ಯರ ನೇಮಕಾತಿಯಲ್ಲಿ ವಿಳಂಬವಾಗುತ್ತಿದ್ದು ಇದೀಗ ಯಡಿಯೂರಪ್ಪ ನೇತ್ರತ್ವದ ಸರಕಾರದಲ್ಲಿ ಯಾವುದೇ ಅಡೆತಡೆಯಿಲ್ಲದೇ ನೇರ ನೇಮಕಾತಿ ನಡೆಸಲಾಗುವುದು. ಅದರಂತೆ ಯಾವುದೇ ವೈದ್ಯ ಖಾಸಗಿ ಆಸ್ಪತ್ರೆ ಬಿಟ್ಟು ಸರಕಾರಿ ಆಸ್ಪತ್ರೆಗೆ ಬರುವುದಾದರೆ ಖಾಸಗಿ ಆಸ್ಪತ್ರೆಯಲ್ಲಿ ನೀಡುವಷ್ಟೇ ವೇತನ ನಮ್ಮ ಸರಕಾರ ನೀಡಲಿದೆ ಎಂದರು. 

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಎಲ್ಲರೂ ಅನಾರೋಗ್ಯ ಮುಕ್ತರಾಗಬೇಕು. ಸ್ವರ್ಣ ಕಾರ್ಕಳ ಸ್ವಚ್ಚ ಕಾರ್ಕಳವಾದ ಬಳಿಕ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಲಿದೆ. ಅದಕ್ಕಾಗಿ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಿ. ಸರಕಾರದ ಕ್ರಮದಲ್ಲಿ ಗೊಂದಲವಿದ್ದು ಕೆಲವು ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲು ಸಾದ್ಯವಾಗುತ್ತಿಲ್ಲ. ಅದಕ್ಕಾಗಿ 3ಎ ಕಾಯ್ದೆಯನ್ನು ತೆಗೆದು ಹಾಕಿದ್ದಲ್ಲಿ ಉಳಿದ ರಾಜ್ಯದಲ್ಲಿ ರೋಗಿಗಳಿಗೆ ಸಿಗುವ ಎಲ್ಲಾ ಸರಕಾರಿ ಚಿಕಿತ್ಸೆಗಳು ಉಚಿತವಾಗಿ ಲಭ್ಯವಾಗಲಿವೆ. ಅದಕ್ಕಾಗಿ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು ಮುಂದೆ ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ಕೊರತೆಗಳು ಬಾರದಂತೆ ಸುಸಜ್ಜಿತವಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರ ಭಾವನೆಯನ್ನು ಅರ್ಥ ಮಾಡಿಕೊಂಡು ಯಾವುದೇ ಸೇವೆಯಲ್ಲಿ ಕೊರತೆ ಕಾಣದಂತೆ ವೈದ್ಯರು ತಮ್ಮ ಸೇವೆಯನ್ನು ನೀಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪಿ.ಕೆ.ಮಲ್ಯ, ಗುತ್ತಿಗೆದಾರ ಯತೀಶ್ ಕುಮಾರ್, ಡಿ ಗ್ರೂಪ್ ನೌಕರ ಸುಧಾಕರ, ಹಿರಿಯ ಶುಶ್ರೂಷಕಿ ಗೋಪಿ ಅವರನ್ನು ಅಭಿನಂದಿಸಲಾಯಿತು. 

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್, ಜಿ.ಪಂ.ಸದಸ್ಯರುಗಳಾದ ಉದಯ ಎಸ್.ಕೋಟ್ಯಾನ್, ಸುಮಿತ್ ಶೆಟ್ಟಿ ಬೈಲೂರು, ರೇಷ್ಮಾ ಉದಯ ಶೆಟ್ಟಿ, ಜ್ಯೋತಿ ಹರೀಶ್ ಮತ್ತು ದಿವ್ಯಶ್ರೀ ಜಿ.ಅಮೀನ್, ಮೈಸೂರು ವಿಭಾಗದ ಸಹನಿರ್ದೇಶಕಿ ಡಾ.ಪುಷ್ಪಲತಾ, ಜಿ.ಪಂ.ಸಿಇಒ ಪ್ರೀತಿ ಗೆಹ್ಲೊಟ್, ಎಂಸಿಎಫ್ ನಿರ್ದೇಶಕ ಪ್ರಭಾಕರ್, ಡಾ.ನಾರಾಯಣ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶೈಲೇಂದ್ರ ರಾವ್ ಉಪಸ್ಥಿತರಿದ್ದರು.  ಜಿಲ್ಲಾ ಆರೋಗ್ಯಾಧಿಕಾರಿ ಎಚ್.ಅಶೋಕ್ ಸ್ವಾಗತಿಸಿದರು. ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಡಾ.ಕೃಷ್ಣಾನಂದ ಶೆಟ್ಟಿ ವಂದಿಸಿದರು. 

ಕಾಂಗ್ರೆಸ್ ನಾಯಕರಿಗೆ ಆಹ್ವಾನಿಸದಿರುವುದು ಅತ್ಯಂತ ಖಂಡನೀಯ: ಬಿಪಿನ್‍ ಚಂದ್ರಪಾಲ್ ನಕ್ರೆ 
ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಸುಮಾರು 8.70 ಕೋಟಿ ರೂ. ಅನುದಾನ ಬಿಡುಗಡೆಯೊಂದಿಗೆ ನಿರ್ಮಾಣಗೊಂಡ ಕಾರ್ಕಳದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡದ ಉದ್ಫಾಟನಾ ಸಂದರ್ಭದಲ್ಲಿ ಈ ಕಟ್ಟಡಕ್ಕೆ ಶಿಲಾನ್ಯಾಸಗೈದ, ಅನುದಾನ ಬಿಡುಗಡೆಗೊಳಿಸಿದ ಮತ್ತು ಈ ಆಸ್ಪತ್ರೆಯ ಅಭಿವೃದ್ಧಿಯ ಕನಸು ಕಂಡು, ಇಂದಿನ ಅಭಿವೃದ್ಧಿಯ ನೀಲನಕ್ಷೆ ರಚಿಸಿದ್ದ ಡಾ. ಎಂ. ವೀರಪ್ಪ ಮೊಯ್ಲಿ ಸೇರಿ ಕಾಂಗ್ರೆಸಿನ ಯಾವುದೇ ನಾಯಕರನ್ನು ಪರಿಗಣಿಸದೇ ಆಹ್ವಾನಿಸದೇ ಇರುವುದು ಖಂಡನೀಯ. ಇದೊಂದು ವ್ಯವಸ್ಥಿತ ರೀತಿಯ ರಾಜಕೀಯ ಹುನ್ನಾರ ಎಂದು ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ತಿಳಿಸಿದೆ. 

ಕೇಂದ್ರದ ಯುಪಿಎ ಸರಕಾರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಡಾ. ಎಂ. ವೀರಪ್ಪ ಮೊಯಿಲಿಯವರು ಈ ಆಸ್ಪತ್ರೆಯ ಹಳೆಯ ಕಟ್ಟಡದ ಅಭಿವೃದ್ಧಿಗೆ ಓಎನ್‍ಜಿಸಿ ಸಾಮಾಜಿಕ ನಿಧಿಯಿಂದ ಸುಮಾರು 1ಕೋಟಿ ರೂ. ದೇಣಿಗೆಯನ್ನು ಕೊಡಿಸಿದ್ದು, ಅದರೊಂದಿಗೆ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ನೂತನ ಕಟ್ಟಡ ನಿರ್ಮಾಣದ ನೀಲನಕ್ಷೆ ರಚನೆಗೆ ಅಂದೇ ಅಡಿಗಲ್ಲು ಹಾಕಲಾಗಿತ್ತು.  ರಾಜ್ಯದಲ್ಲಿ ಕಳೆದ ಬಾರಿ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಅಂದಿನ ಆರೋಗ್ಯ ಸಚಿವ ಯು.ಟಿ. ಖಾದರ್ ಈ ನೂತನ ಆಸ್ಪತ್ರೆ ಕಟ್ಟಡಕ್ಕಾಗಿ ನಬಾರ್ಡಿನಿಂದ 6 ಕೋಟಿ ರೂ. ಬಿಡುಗಡೆಗೊಳಿಸಿದ್ದರೆ, ಅದೇ ಸರಕಾರದ ಆಡಳಿತಾವಧಿಯಲ್ಲಿ ಮತ್ತೆ ಆರೋಗ್ಯ ಸಚಿವರಾದ ರಮೇಶ ಕುಮಾರ್ ಈ ಕಟ್ಟಡಕ್ಕೆ ಹೆಚ್ಚುವರಿ 2.7 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ ಮಧ್ವರಾಜ್ 2017ರಲ್ಲಿ ಈ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಎಲ್ಲಾ ಅನುದಾನಗಳ ಬಿಡುಗಡೆಯ ಹಿಂದೆ ಮಾಜಿ ಶಾಸಕ ದಿ. ಎಚ್. ಗೋಪಾಲ ಭಂಡಾರಿಯವರ ಪರಿಶ್ರಮ ಉಲ್ಲೇಖನೀಯವಾಗಿದ್ದು,  ಈ ನಿಟ್ಟಿನಲ್ಲಿ ಈ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರ ಕೊಡುಗೆ ಅಪಾರವಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ತಿಳಿಸಿದೆ. 

ಯಾರೋ ಮಾಡಿದ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ಜನರ ದಿಕ್ಕು ತಪ್ಪಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಪಾರಂಪರಿಕ ಗುಣ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ರಾಜಕೀಯದ ಹೆಸರಿನಲ್ಲಿ ಅಭಿವೃದ್ಧಿ ಸಾಧನೆಯ ನೈಜ ಹರಿಕಾರರನ್ನು ಕತ್ತಲೆಯಲ್ಲಿಡುವುದು ರಾಜಧರ್ಮವಲ್ಲ. ಇದು ಇಲ್ಲಿನ ಶಾಸಕರು ಹಾಗೂ ಬಿಜೆಪಿ ನಾಯಕರಿಗೆ ಭೂಷಣವಲ್ಲ ಎಂದು ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನಚಂದ್ರ ಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News