ನಾಳೆ ಶಬರಿಮಲೆ , ರಫೇಲ್ ಮೇಲ್ಮನವಿ ಅರ್ಜಿಗಳ ತೀರ್ಪು ಪ್ರಕಟ

Update: 2019-11-13 14:23 GMT

ಹೊಸದಿಲ್ಲಿ,ನ.13: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ಮತ್ತು ರಫೇಲ್ ಒಪ್ಪಂದ ಸೇರಿದಂತೆ ಎರಡು ಮಹತ್ವದ ಪ್ರಕರಣಗಳಲ್ಲಿ ತನ್ನ ಆದೇಶಗಳ ವಿರುದ್ಧ ಸಲ್ಲಿಕೆಯಾಗಿರುವ ಪುನರ್‌ಪರಿಶೀಲನೆ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ತನ್ನ ತೀರ್ಪುಗಳನ್ನು ಪ್ರಕಟಿಸಲಿದೆ.

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ

ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್ ಜೊತೆಗಿನ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿರುವ ಸರ್ವೋಚ್ಚ ನ್ಯಾಯಾಲಯದ ಆದೇಶದ ಪುನರ್‌ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ತೀರ್ಪು ನ.14ರಂದು ಹೊರಬೀಳಲಿದೆ.

36 ರಫೇಲ್ ವಿಮಾನಗಳ ಖರೀದಿ ನಿರ್ಧಾರ ಪ್ರಕ್ರಿಯೆಯಲ್ಲಿ ಶಂಕಿಸಲು ಯಾವುದೇ ಕಾರಣಗಳಿಲ್ಲ ಎಂಬ ತೀರ್ಪಿನ ಪುನರ್ ಪರಿಶೀಲನೆಯನ್ನು ಕೋರಿ ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ ಅರ್ಜಿ ಸೇರಿದಂತೆ ಸಲ್ಲಿಕೆಯಾಗಿರುವ ಮೂರು ಅರ್ಜಿಗಳಿಗೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಮೇ 10ರಂದು ಕಾಯ್ದಿರಿಸಿತ್ತು. ವಕೀಲ ವಿನೀತ ಧಂಡಾ ಮತ್ತು ಆಪ್ ಶಾಸಕ ಸಂಜಯ ಸಿಂಗ್ ಅವರು ಇತರ ಇಬ್ಬರು ಅರ್ಜಿದಾರರಾಗಿದ್ದು,ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರ ಪೀಠವು ಗುರುವಾರ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ. 58,000 ಕೋ.ರೂ.ಗಳ ಒಪ್ಪಂದದಲ್ಲಿ ಅಕ್ರಮಗಳ ಕುರಿತು ತನಿಖೆ ನಡೆಸಬೇಕು ಎಂದು ಕೋರಿದ್ದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು 2018,ಡಿ.14ರಂದು ವಜಾಗೊಳಿಸಿತ್ತು.

ಶಬರಿಮಲೆ ಪ್ರಕರಣ

ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 65 ಅರ್ಜಿಗಳ ಕುರಿತು ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ಪ್ರಕಟಿಸಲಿದೆ. 10ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನದಲ್ಲಿ ಪ್ರವೇಶಾವಕಾಶ ಕಲ್ಪಿಸಿದ್ದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಕೇರಳದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ಬಳಿಕ ಸಲ್ಲಿಕೆಯಾಗಿದ್ದ ಈ ಅರ್ಜಿಗಳಲ್ಲಿ 56 ಪುನರ್‌ಪರಿಶೀಲನೆ ಅರ್ಜಿಗಳು,ನಾಲ್ಕು ಹೊಸ ರಿಟ್ ಅರ್ಜಿಗಳು ಮತ್ತು ಐದು ವರ್ಗಾವಣೆ ಅರ್ಜಿಗಳು ಸೇರಿವೆ.

ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ,ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಎ.ಎಂ.ಖನ್ವಿಲ್ಕರ್, ಡಿ.ವೈ.ಚಂದ್ರಚೂಡ ಮತ್ತು ಇಂದು ಮಲ್ಹೋತ್ರಾ ಅವರ ಪೀಠವು ಫೆ.6ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

 2018,ಸೆ.28ರ ತನ್ನ 4:1 ಬಹುಮತದ ತೀರ್ಪಿನಲ್ಲಿ 10ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ನಿಷೇಧವನ್ನು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಶತಮಾನಗಳಷ್ಟು ಹಳೆಯದಾದ ನಿಷೇಧ ಪದ್ಧತಿಯು ಕಾನೂನುಬಾಹಿರವಾಗಿದೆ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಎತ್ತಿ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News