ಉಡುಪಿ ನಗರ ಎಸ್ಸೈ ಅಮಾನತು ವಿವಾದ; ಐಜಿಪಿಯಿಂದ ಮುಂದಿನ ನಿರ್ಧಾರ: ಎಸ್ಪಿ ನಿಶಾ ಜೇಮ್ಸ್

Update: 2019-11-13 10:11 GMT

ಉಡುಪಿ, ನ.13: ವಿವಿಧ ಸಂಘಟನೆಗಳ ಮತ್ತು ಶಾಸಕರ ವಿರೋಧದ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣಾ ಎಸ್ಸೈ ಅನಂತಪದ್ಮನಾಭ ಹಾಗೂ ಹೆಡ್ ಕಾನ್‌ಸ್ಟೇಬಲ್ ಜೀವನ್ ಕುಮಾರ್ ಅವರ ಅಮಾನತು ಆದೇಶದ ವಿಚಾರವನ್ನು ಮುಂದಿನ ನಿರ್ಧಾರಕ್ಕಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅವರು ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ನ.2ರಂದು ಗೆಳೆತಿಯೊಂದಿಗೆ ಮಾತನಾಡುತ್ತಿದ್ದ ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪದಡಿ ಮತ್ತು ಪ್ರಾಥಮಿಕ ವಿಚಾರಣಾ ವರದಿಯ ಆಧಾರದಲ್ಲಿ ಎಸ್ಪಿ ಇವರಿಬ್ಬರನ್ನು ನ.12ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

ಇದಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಸೇರಿದಂತೆ ವಿವಿಧ ಸಂಘಟನೆ ಗಳಿಂದ ವಿರೋಧಗಳು ವ್ಯಕ್ತವಾಗಿದ್ದವು. ಅಮಾನತು ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಪಿ ಈ ವಿಚಾರದ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಮುಂದಿನ ನಿರ್ಧಾರವನ್ನು ಐಜಿಪಿ ತೆಗೆದುಕೊಳ್ಳಲಿದ್ದಾರೆ ಎಂದು ಎಸ್ಪಿ ನಿಶಾ ಜೇಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

ನ.2ರಂದು ರಾತ್ರಿ 8 ಗಂಟೆ ಸುಮಾರಿಗೆ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಸ್ನೇಹಿತರಾದ ಆಶೀಸ್, ಶಾನು, ತಾಹಿಮ್ ಮತ್ತು ಶಿವಾನಿ ಎಂಬವರು ಮಾತನಾಡುತ್ತಿರುವಾಗ ಸುನೀಲ್ ಪೂಜಾರಿ, ರಾಕೇಶ್ ಸುಮರ್ಣ ಮತ್ತು ಇತರರು ಬಂದು ಇವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿ ಆರೋಪಿಗಳು ನ.4ರಂದು ಫೇಸ್‌ಬುಕ್‌ನಿಂದ ಡೌನ್‌ಲೋಡ್ ಮಾಡಿ ಅಶೀಸ್ ಮತ್ತು ಶಿವಾನಿಯ ಭಾವಚಿತ್ರಗಳನ್ನು ಮತ್ತು ಸ್ನೇಹಿತರೊಂದಿಗೆ ಪಾರ್ಕಿನಲ್ಲಿ ಮಾತಾನಾಡುತ್ತಿರುವಾಗ ಏಕಾಏಕಿ ದೈಹಿಕ ಹಲ್ಲೆ ನಡೆಸಿದ ಭಾವಚಿತ್ರಗಳನ್ನು ವಾಟ್ಸಾಪ್‌ನಲ್ಲಿ ಹಾಕಿದ್ದರು. ಈ ಬಗ್ಗೆ ಹಲ್ಲೆಗೊಳಗಾದವರು ನೀಡಿದ ದೂರಿನಂತೆ ನ.5ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಕೃಷ್ಣಾನಂದ ಎಂಬವರು ಇದೇ ವಿಚಾರಕ್ಕೆ ಸಂಬಂಧಿಸಿ ಆಶೀಸ್ ವಿರುದ್ಧ ಪ್ರತಿದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News