ಅಯೋಧ್ಯೆ ತೀರ್ಪಿಗೂ ಕೇರಳದ ಈ ಆಟೊ ಚಾಲಕನಿಗೂ ಏನು ಸಂಬಂಧ ಗೊತ್ತೇ?

Update: 2019-11-13 10:33 GMT

ಕೊಚ್ಚಿನ್, ನ.13: ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೆ ಕೇರಳ ನಂಟು ಇದೆ. ತ್ರಿಶ್ಶೂರಿನ ವೈಲತೂರು ನಿವಾಸಿ ಕೆ.ಸಿ.ರಾಜನ್ ಎಂಬುವವರು1992ರಲ್ಲಿ ಗುರುವಾಯೂರು ದೇವಸ್ವಂ ವ್ಯವಸ್ಥಾಪನಾ ಸಮಿತಿ ವಿರುದ್ಧ ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸಿದಂತೆ ದೇವಸ್ಥಾನವೇ ಒಂದು ಕಾನೂನಾತ್ಮಕ ಸಂಸ್ಥೆ ಎನ್ನುವುದನ್ನು ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ದೇವಾಲಯದ ವ್ಯವಹಾರಗಳನ್ನು ವ್ಯವಸ್ಥಾಪನಾ ಸಮಿತಿ ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. "ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ಹೇಳಿದಂತೆ, ಸರ್ಕಾರಿ ಪ್ರಾಧಿಕಾರಗಳ ಕ್ರಿಯೆ ಅಥವಾ ನಿಷ್ಕ್ರಿಯತೆಯಿಂದಾಗಿ ಸಂವಿಧಾನದ 25 ಹಾಗೂ 26ನೇ ವಿಧಿ ಅನ್ವಯ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಘಂನೆಯಾದಾಗ ಭಕ್ತರು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದಾಗಿದೆ" ಎಂದು ಅಯೋಧ್ಯೆ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ವೃತ್ತಿಯಲ್ಲಿ ಆಟೊ ಚಾಲಕರಾಗಿರುವ ರಾಜನ್ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಕೆ.ಎಸ್.ಪರಿಪೂರ್ಣನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ದೇವಾಲಯದ ಚಿನ್ನವನ್ನು ಆರ್‌ಬಿಐಗೆ ಅಡವಿಟ್ಟ ಕ್ರಮದಿಂದ ಮತ್ತು ಧನಲಕ್ಷ್ಮಿ ಬ್ಯಾಂಕ್‌ನಿಂದ ಅವಧಿಪೂರ್ವವಾಗಿ ಠೇವಣಿ ವಾಪಸ್ ಪಡೆಯುವ ಮೂಲಕ ದೇವಸ್ಥಾನಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ವಾದಿಸಿದ್ದರು. ತಮ್ಮ ಅರ್ಜಿಯನ್ನು ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಉಲ್ಲೇಖಿಸಿರುವುದು ಸಂತಸ ತಂದಿದೆ ಎಂದು ರಾಜನ್ ಹೇಳಿದ್ದಾರೆ.

ಗುರುವಾಯೂರು ದೇವಸ್ವಂ ಕಾಯ್ದೆ ಅನ್ವಯ ಜಿಲ್ಲಾ ನ್ಯಾಯಾಲಯದಲ್ಲಷ್ಟೇ ಈ ಸಂಬಂಧ ವಿಚಾರಣೆ ನಡೆಸಲು ಅವಕಾಶವಿದೆ ಎಂಬ ದೇವಾಲಯ ಪರ ವಕೀಲರ ವಾದವನ್ನು ಹೈಕೋರ್ಟ್ ತಳ್ಳಿಹಾಕಿತ್ತು. ಕೇರಳ ಹೈಕೋರ್ಟ್ ಈ ಸಂಬಂಧ ನೀಡಿದ ತೀರ್ಪಿನಲ್ಲಿ ಹಿಂದೂ ದೇವಾಲಯವು ಕಾನೂನಾತ್ಮಕ ವ್ಯಕ್ತಿಯಾಗಿರುವುದರಿಂದ ನಾಗರಿಕ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 92ರ ಅನ್ವಯ ಮತ್ತು ಸಂವಿಧಾನದ 226 ಹಾಗೂ 32ನೇ ವಿಧಿಯ ಆಶಯದಂತೆ ಅದನ್ನು ಸಂರಕ್ಷಿಸಬೇಕಾದ್ದು ಅಗತ್ಯ ಎಂದು ಹೇಳಿತ್ತು. ಇದನ್ನೇ ಸುಪ್ರೀಂಕೋರ್ಟ್ ತೀರ್ಪಿನಲ್ಲೂ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News