ಜಾಗೃತ ಸಮಾಜದಲ್ಲಿ ಪತ್ರಿಕೆ ಯಶಸ್ವಿ ಕೆಲಸ ಮಾಡಲು ಸಾಧ್ಯ: ದಿನೇಶ್ ಅಮೀನ್ ಮಟ್ಟು

Update: 2019-11-13 14:27 GMT

ಕುಂದಾಪುರ, ನ.13: ಜಾಗೃತ ಸಮಾಜದಲ್ಲಿ ಮಾತ್ರ ಒಂದು ಪತ್ರಿಕೆ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಓದುಗನ ವಿಶ್ವಾಸಾರ್ಹತೆ ಕಳೆದು ಕೊಂಡರೆ ಪತ್ರಿಕೆ ರದ್ದಿಯಾಗಿ ಬಿಡುತ್ತದೆ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಕುಂದಾಪುರ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಮಂಗಳವಾರ ನಡೆದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ‘ಕವಲು ದಾರಿಯಲ್ಲಿ ಪತ್ರಕರ್ತ’ ಎಂಬ ವಿಷಯದ ಕುರಿತು ಅವರು ದಿಕ್ಸೂಚಿ ಭಾಷಣ ಮಾಡಿದರು.

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪತ್ರಿಕೆ ಓದುಗ ಕೊಡುವ ಹಣದಿಂದ ನಡೆಯುತ್ತಿಲ್ಲ. ಪತ್ರಿಕೆ ನಡೆಸುವವರಿಗೂ ಓದುಗರಿಗೂ ಸಂಬಂಧವಿದ್ದರೆ, ಚಾನೆಲ್ ನಡೆಸುವವರಿಗೂ ವೀಕ್ಷಕರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಇಂತಹ ವ್ಯವಹಾರ ಮಾದರಿಯನ್ನು ಬದಲಾವಣೆ ಮಾಡುವವರೆಗೆ ಮಾಧ್ಯಮ ಇದೇ ರೀತಿ ಕಲು ದಾರಿಯಲ್ಲಿ ಇರುತ್ತದೆ ಎಂದರು.
ಪತ್ರಿಕೆ ಎಂಬುದು ಓದುಗನ ಋಣದಲ್ಲಿರಬೇಕು ಮತ್ತು ಬದ್ಧವಾಗಿರಬೇಕು. ಉತ್ಪನ್ನ ಎಂಬುದು ಬಳಕೆದಾರನ ಋಣದಲ್ಲಿರಬೇಕು ಮತ್ತು ಬದ್ದವಾಗಿರ ಬೇಕು. ಆದರೆ ಇಂದು ಮಾಧ್ಯಮ ಒಂದು ವೃತ್ತಿಯಾಗಿ ಮತ್ತು ಉದ್ಯಮವಾಗಿ ಓದುಗನ ಮತ್ತು ಬಳಕೆದಾರನ ಋಣದಲ್ಲಿಯೂ ಇಲ್ಲವಾಗಿದೆ. ಹೀಗಾಗಿ ಮಾಧ್ಯಮ ಕವಲು ದಾರಿಯಲ್ಲಿದೆ. ಇದಕ್ಕೆ ನಾವೇ ಪರಿಹಾರವನ್ನು ಕಂಡುಕೊಳ್ಳ ಬೇಕಾಗಿದೆ ಎಂದು ಅವರು ತಿಳಿಸಿದರು.

ಪತ್ರಕರ್ತನ ಆತ್ಮಸಾಕ್ಷಿ ದಿಕ್ಕೆಟ್ಟು ನಿಂತ ಪರಿಸ್ಥಿತಿಯಲ್ಲಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಿಕೆಯೇ ಭವಿಷ್ಯದ ಮಾಧ್ಯಮವಾಗಿದೆ. ಎಲ್ಲಾ ಬದಲಾವಣೆಗಳನ್ನು ಮೆಟ್ಟಿ ನಿಂತು ಪತ್ರಕರ್ತ ಕೆಲಸ ಮಾಡಬೇಕಾಗಿದೆ. ಪತ್ರಕರ್ತ ಮೊದಲು ಸೂಕ್ಷ್ಮತೆಯನ್ನು ಕಳೆದುಕೊಳ್ಳಬಾರದು. ಸೂಕ್ಷ್ಮತೆ ಇಲ್ಲದವ ಪತ್ರಕರ್ತನಾಗಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಕರ್ತನಿಗೆ ಹಿಂದೆ ಇದ್ದ ಗೌರವ ಈಗ ಇದೆಯೇ ಎಂಬುದರ ಬಗ್ಗೆ ನಾವು ಪ್ರಶ್ನೆ ಮಾಡಬೇಕಾಗಿದೆ. ಪತ್ರಕರ್ತ ಇಡೀ ಜಗತ್ತನ್ನು ತನ್ನ ಹೃದಯದಿಂದ ನೋಡಬೇಕು. ಕಳೆದ ಎರಡು ಮೂರು ದಶಕಗಳಲ್ಲಿ ಆಗಿರುವ ಎಲ್ಲ ರೀತಿಯ ಬದಲಾವಣೆಗಳ ಮಧ್ಯೆ ಪತ್ರಕರ್ತ ಸಿಲುಕಿಕೊಂಡಿದ್ದಾನೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.

ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, ಮಾಧ್ಯಮ ಕ್ಷೇತ್ರ ಮತ್ತು ಪೊಲೀಸ್ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಾಧ್ಯಮ ಮತ್ತು ಪೊಲೀಸ್ ಇಲಾಖೆ ಪರಸ್ಪರ ಸಮನ್ವಯದಿಂದ ತಮ್ಮ ಕರ್ತವ್ಯ ವನ್ನು ನಿರ್ವಹಿಸುವುದರಿಂದ ಸಾಮಾಜಿಕ ಸಾಮರಸ್ಯವನ್ನು ಕಾಾಡಲು ಸಹಾಯವಾಗುತ್ತದೆ ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹಾಗೂ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಪತ್ರಕರ್ತ ಸಂತೋಷ್ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಕಾರ್ಯನಿತರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ವಹಿಸಿದ್ದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಕೆ.ಸಿ., ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ್ ಎಸ್.ಮರವಂತೆ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ತಾಲೂಕು ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ಸತೀಶ್ ಆಚಾರ್ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ರಾಮ ಕೃಷ್ಣ ಹೇರ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ರಾಘವೇಂದ್ರ ಪೈ ಸ್ವಾಗತಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ವಂದಿಸಿದರು. ಜಯಶೇಖರ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

ಮಾಧ್ಯಮ ನಾಲ್ಕನೇ ಅಂಗ ಅಲ್ಲ !

ಸಂವಿಧಾನದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮಾತ್ರವೇ ಇರುವುದು. ನಾಲ್ಕನೇ ಅಂಗ ಮಾಧ್ಯಮ ಎನ್ನುವುದು ಇಲ್ಲ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಅಲ್ಲ. ಈ ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕು ಎಂದು ದಿನೇಶ್ ಅಮೀನ್ ಮಟ್ಟು ನುಡಿದರು.

ಮಾಧ್ಯಮ ಇಂದು ವೃತ್ತಿಯಾಗಿ ಉಳಿದುಕೊಳ್ಳದೆ ಉದ್ಯಮವಾಗಿ ಬೆಳೆದು ನಿಂತಿದೆ. ಮಾಧ್ಯಮ ಎಂಬುದು ಬಂಡವಾಳ ಹೂಡಿ ಲಾಭ ಪಡೆಯುವುದಲ್ಲ. ಇದುವೇ ಮಾಧ್ಯಮದ ಇಂದಿನ ಎಲ್ಲಾ ಸಮಸ್ಯೆಗಳ ಮೂಲವಾಗಿದೆ. ವೃತ್ತಿಯು ಉದ್ಯಮ ಆಗುತ್ತಿರುವುದರಿಂದ ಅದರ ದುಷ್ಪರಿಣಾಮಗಳನ್ನು ಅದರಲ್ಲಿ ಇರು ವವರೇ ಎದುರಿಸಬೇಕಾಗುತ್ತದೆ. ಹೀಗೆ ಪತ್ರಕರ್ತ ಕವಲುದಾರಿಯಲ್ಲಿ ದಿಕ್ಕೆಟ್ಟು ನಿಂತಿದ್ದಾನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News