ಮೀನಿನ ವಾಹನಗಳ ತ್ಯಾಜ್ಯ ನೀರು ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮನವಿ

Update: 2019-11-13 14:30 GMT

ಉಡುಪಿ, ನ.13: ಮೀನು ಸಾಗಾಟ ವಾಹನದಲ್ಲಿರುವ ತ್ಯಾಜ್ಯ ನೀರನ್ನು ಸೂಕ್ತ ವಿಲೇವಾರಿ ಮಾಡಲು ಹೆದ್ದಾರಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸರಿ ಯಾದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಮಂಗಳೂರು ದಕ್ಕೆ ಮೀನು ಲಾರಿ ಚಾಲಕರ ಸಂಘ(ಸಿಐಟಿಯು) ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಎಸ್ಪಿ ನಿಶಾ ಜೇಮ್ಸ್ ಅವರಿಗೆ ಮನವಿ ಸಲ್ಲಿಸಿತು.

ಮೀನು ಸಾಗಾಟದ ಬಹುತೇಕ ಲಾರಿ/ಟೆಂಪೊಗಳಲ್ಲಿ ಮಾಲಿನ್ಯ ನೀರು ಸಂಗ್ರಹವಾಗಲು ಸುಮಾರು 200ರಿಂದ 400 ಲೀಟರ್ ಸಾಮರ್ಥ್ಯದ ಕಂಟೈನರ್ ಜೋಡಿಸಲಾಗಿದೆ. ಆದರೂ ಕೆಲವೊಮ್ಮೆ ಕಂಟೈನರ್ ತುಂಬಿ ನೀರು ದಾರಿ ಮಧ್ಯದಲ್ಲಿ ಚೆಲ್ಲುತ್ತಿರುತ್ತದೆ. ಇದರಿಂದಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವಿಚಾರದಲ್ಲಿ ಕೆಲವು ಕಡೆಗಳಲ್ಲಿ ಸಾರ್ವಜನಿಕರು ವಾಹನವನ್ನು ತಡೆದು, ವಾಹನ ಜಖಂಗೊಳಿಸಿ ದೈಹಿಕ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಹೆದರಿ ವಾಹನ ಚಾಲಕರು ಈ ವೃತ್ತಿಯನ್ನೇ ತ್ಯಜಿಸಲು ಮುಂದಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೀನಿನ ಮಾಲಿನ್ಯ ನೀರು ಬಿಡಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಂಘ ಮನವಿಯಲ್ಲಿ ಒತ್ತಾಯಿಸಿದೆ.

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಪ್ರತಿ 80 ಕಿ.ಮೀ.ನಲ್ಲಿ ಸಮೀಪದ ಹೊಳೆಗೆ ಮಾಲಿನ್ಯ ನೀರು ಬಿಡುವ ವ್ಯವಸ್ಥೆ ಕಲ್ಪಿಸಬೇಕು. ಹೊಳೆಯ ಬದಿ ಸ್ಥಳವಿಲ್ಲದೇ ಹೋದರೆ ಇಂಗು ಗುಂಡಿ/ಪ್ಲಾಸ್ಟಿಕ್ ಬಂಕ್ ಮಾಡಿ ಅದಕ್ಕೆ ಮಾಲಿನ್ಯ ನೀರು ಬಿಡುವ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಪ್ರತಿ ವಾಹನದಿಂದ ನಿರ್ದಿಷ್ಟ ಶುಲ್ಕವನ್ನು ಸಂಗ್ರಹಿಸಿ ಖಾಸಗಿಯವರಿಗೆ ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಬೇಕು ಎಂದು ಸಂಘ ಮನವಿಯಲ್ಲಿ ಸಲಹೆ ನೀಡಿದೆ.

ಈ ಸಂದರ್ಭ ಸಂಘದ ಅಧ್ಯಕ್ಷ ಮುಹಮ್ಮದ್ ಹನೀಫ್, ಪ್ರಮುಖರಾದ ಮುಹಮ್ಮದ್ ಶರೀಫ್, ಇಬ್ರಾಹಿಂ, ಇಕ್ಬಾಲ್, ನಝೀರ್, ರಾಜೇಶ್ ಎಚ್.ಎಂ.ಸಿ., ಅನೀಶ್, ಫಾರೂಕ್, ಮಸೂದ್, ಅಶ್ಪಾಕ್, ಮೊಹಮ್ಮದ್ ನಾಸೀರ್, ಪ್ರಕಾಶ್ ಸಾಸ್ತಾನ, ಸುರೇಶ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News