ಅನಧಿಕೃತ ಮರಳು ದಾಸ್ತಾನು ಪುನರಾವರ್ತನೆ ಆದಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ: ಜಿಲ್ಲಾಧಿಕಾರಿ

Update: 2019-11-13 14:34 GMT

ಉಡುಪಿ, ನ.13: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದನ್ನು ಮನಗಂಡು ಜಿಲ್ಲೆಯಲ್ಲಿ ಲಭ್ಯವಿರುವ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು, ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಹಾಗೂ ಬಜೆ ಅಣೆಕಟ್ಟಿನಲ್ಲಿ ಹೂಳೆತ್ತಿ, ಈ ಹೂಳಿನಲ್ಲಿ ದೊರಕುವ ಮರಳನ್ನು ಬೇರ್ಪಡಿಸಿ ಸಾಗಾಟ ಮಾಡಲು ಅನುಮತಿ ನೀಡಿರುವ ಪರವಾನಿಗೆದಾರರು ಅಥವಾ ಇತರರು ಅನಧಿಕೃತವಾಗಿ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ದೂರು ದಾಖಲು: ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ವಿರುದ್ಧ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವು ಗೊಳಿಸುವ ಕಾರ್ಯ ಪ್ರಾರಂಭವಾದ ನಂತರ ನ್ಯಾಯಾಲಯದಲ್ಲಿ ಎಂಎಂಡಿಆರ್ ಕಾಯ್ದೆಯಡಿಯಲ್ಲಿ ಹಾಗೂ ಕರ್ನಾಟಕ ಉಪಖನಿಜ ರಿಯಾಯತಿ ನಿಯಮಾವಳಿ 1994ರನ್ವಯ 23 ಖಾಸಗಿ ದೂರುಗಳು ದಾಖಲಾಗಿವೆ.

ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಬಗ್ಗೆ ಮಾಹಿತಿ ಬರುತ್ತಿರುವುದರಿಂದ ಸಂಬಂಧಿಸಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸಾರ್ವಜನಿಕರು ಅಗತ್ಯವಿರುವಷ್ಟು ಮರಳನ್ನು ಮಾತ್ರ ಸಾಗಾಟ ಪರವಾನಿಗೆ ಯೊಂದಿಗೆ ದಾಸ್ತಾನಿರಿಸಲು ಸೂಚಿಸಲಾಗಿದೆ. ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ ಅಥವಾ ದಾಸ್ತಾನು ಪುನರಾವರ್ತಿತವಾದಲ್ಲಿ ನಿಯಮಾನುಸಾರ ಗೂಂಡಾ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆಗಿರುವ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News