ಮಂಗಳೂರು ಮನಪಾ ಚುನಾವಣೆ : ಮತದಾನದಿಂದ ದೂರಸರಿದ 1,55,659 ಮತದಾರರು!

Update: 2019-11-13 14:51 GMT

ಮಂಗಳೂರು, ನ.13: ಮಂಗಳೂರು ಮಹಾನಗರ ಪಾಲಿಕೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ 1,55,659 ಮಂದಿ ಮತದಾನದಿಂದ ದೂರ ಸರಿದಿದ್ದಾರೆ. ಮತದಾನ ಹೆಚ್ಚಳಕ್ಕೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿದ್ದರೂ ಕೂಡಾ ಬಹುತೇಕ ಮತದಾರರು ಮಾತ್ರ ಮತಗಟ್ಟೆಯತ್ತ ಹೆಜ್ಜೆ ಹಾಕಲಿಲ್ಲ.

ಮನಪಾದ 60 ವಾರ್ಡ್‌ಗಳಿಗೆ 448 ಮತಗಟ್ಟೆಗಳನ್ನು ತೆರೆಯಲಾಗಿತ್ತು. 180 ಅಭ್ಯರ್ಥಿಗಳು ಕಣದಲ್ಲಿದ್ದರು. 1,90,740 ಪುರುಷ ಮತ್ತು 2,04,088 ಮಹಿಳಾ ಹಾಗೂ 66 ತೃತೀಯ ಲಿಂಗಿಗಳ ಸಹಿತ 3,94,894 ಮತದಾರರು ಮತದಾನದ ಹಕ್ಕುಗಳನ್ನು ಪಡೆದಿದ್ದರು. ಆದರೆ, 1,12,806 ಪುರುಷ, 1,22,412 ಮಹಿಳಾ ಮತ್ತು 17 ತೃತೀಯ ಲಿಂಗಿಗಳ ಸಹಿತ 2,35,235 ಮತದಾರರು ಮಾತ್ರ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ. ಅಂದರೆ ಪುರುಷರ ಪೈಕಿ ಶೇ.59.14, ಮಹಿಳೆಯರ ಪೈಕಿ ಶೇ.59.98, ತೃತೀಯ ಲಿಂಗಿಗಳ ಪೈಕಿ ಶೇ.25.76ರಷ್ಟು ಮತದಾನವಾಗಿದೆ.

1,90,740 ಪುರುಷ ಮತದಾರರ ಪೈಕಿ 77,934 ಮತದಾರರು ಮತ ಚಲಾಯಿಸಿಲ್ಲ. ಅದೇ ರೀತಿ 2,04,088 ಮಹಿಳಾ ಮತದಾರರ ಪೈಕಿ 81,676 ಮತದಾರರು ಮತ ಚಲಾಯಿಸಿಲ್ಲ. ಅಲ್ಲದೆ, 66 ತೃತೀಯ ಲಿಂಗಿಗಳ ಪೈಕಿ 40 ಮತದಾರರು ಮತ ಚಲಾಯಿಸಿಲ್ಲ. ಅಂದರೆ, ಒಟ್ಟು 1,55.659 ಮತದಾರರು ಹಕ್ಕುಗಳನ್ನು ಚಲಾಯಿಸದೆ ದೂರ ಸರಿದಿದ್ದಾರೆ. ಅಂದರೆ, ಶೇ. 59.57 ಮತದಾರರು ಮತದಾನಗೈದಿದ್ದರೆ, ಶೇ.40.43 ಮತದಾರರು ಮತದಾನ ಮಾಡಿಲ್ಲ.

60 ವಾರ್ಡ್‌ಗಳ ಪೈಕಿ ವಾರ್ಡ್ ನಂಬ್ರ 18ರಲ್ಲಿ 7153 ಮತದಾರರ ಪೈಕಿ 5,060 ಮಂದಿ ಮತದಾನ (ಶೇ.70.74)ಮಾಡುವ ಮೂಲಕ ದಾಖಲೆಯ ಮತ ಚಲಾವಣೆಯಾಗಿದೆ. ವಾರ್ಡ್ ನಂಬ್ರ 40ರಲ್ಲಿ 5,426 ಮತದಾರರ ಪೈಕಿ 2,284 ಮಂದಿ ಮತದಾನ (ಶೇ.42.09) ಮಾಡಿದ್ದು, ಇದು ಅತೀ ಕಡಿಮೆ ಮತದಾನವಾದ ವಾಡ್ ಆಗಿದೆ. ಈ ವಾರ್ಡ್‌ನಲ್ಲಿ 36 ತೃತೀಯ ಲಿಂಗಿಗಳಿದ್ದು, ಕೇವಲ 10 ಮಂದಿ ಮಾತ್ರ ಮತದಾನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News