ಸಂವಿಧಾನ ಬಗ್ಗೆ ವಿವಾದಾತ್ಮಕ ಸುತ್ತೋಲೆ : ಪ್ರೌಢ ಶಿಕ್ಷಣ ನಿರ್ದೇಶಕ ಸಹಿತ ಮೂರು ಅಧಿಕಾರಿಗಳ ಸಸ್ಪೆಂಡ್

Update: 2019-11-13 15:49 GMT
ಶಿಕ್ಷಣ ಸಚಿವ ಸುರೇಶ್ ಕುಮಾರ್

ಬಂಟ್ವಾಳ : ಸಂವಿಧಾನ ದಿನದ ಆಚರಣೆಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಕೈಪಿಡಿಯನ್ನು ಪರಾಮರ್ಶಿಸದೆ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡಿ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ತಂದ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ನಿರ್ದೇಶಕ ಮತ್ತು ಮೂರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಬುಧವಾರ ಆದೇಶವನ್ನು ಉಲ್ಲೇಖಿಸಿ, "ಕೈಪಿಡಿಯನ್ನು ಪರಾಮರ್ಶಿಸದೆ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡಿ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ತಂದ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ನಿರ್ದೇಶಕ ಮಣಿ ಮತ್ತು ಮೂರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

"ಸಂವಿಧಾನ ದಿನದ ಆಚರಣೆಗೆ ಸಂಬಂಧಿಸಿದಂತೆ ಸಿಎಂಸಿಎ ಎಂಬ ಖಾಸಗಿ ಸಂಸ್ಥೆ ಕೈಪಿಡಿಯೊಂದನ್ನು ರಚಿಸಿ ಶಿಕ್ಷಣ ಇಲಾಖೆಗೆ  ಅ.1ರಂದು ಸಲ್ಲಿಸಿತ್ತು. ಅದರ ಪುಟ 1-25ರವರೆಗಿನ ಅಂಶಗಳನ್ನು ತಜ್ಞರ ಗಮನಕ್ಕೆ ತಂದು ಅವರ ಅಭಿಪ್ರಾಯ ಪಡೆದು ಆಯುಕ್ತರ ಅವಗಾಹನೆಗೆ ತರಬೇಕೆಂದೂ, ಆಯುಕ್ತರ ಅನುಮೋದನೆ ಪಡೆದ ನಂತರವೇ ಆ ಕೈಪಿಡಿಯನ್ನು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡಬೇಕೆಂದು ಪ್ರೌಢಶಿಕ್ಷಣ ನಿರ್ದೇಶಕರಿಗೆ ಅ. 3ರಂದು ಟಿಪ್ಪಣಿಯ ಮೂಲಕ ಸ್ಪಷ್ಟವಾಗಿ ಸೂಚನೆ ನೀಡಲಾಗಿತ್ತು" ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

"ಆದರೆ, ಆಯುಕ್ತರ ಗಮನಕ್ಕೆ ತರದೆ ಆ ಕೈಪಿಡಿಯನ್ನು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಅಪಲೋಡ್ ಮಾಡಲಾಗಿದೆ. ಈ ಕೈಪಿಡಿಯಲ್ಲಿ ಸಂವಿಧಾನ ರಚನೆಯಲ್ಲಿ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಕುರಿತು ಪ್ರಶ್ನಾರ್ಹ ವಾಕ್ಯವೊಂದು ಸೇರಿತ್ತು. ಇದು ಗಮನಕ್ಕೆ ಬಂದ ಕೂಡಲೇ ಆ ಕೈ ಪಿಡಿಯನ್ನು ವೆಬ್‌ಸೈಟಿನಿಂದ ತೆಗೆಯಲಾಗಿತ್ತು" ಎಂದು ಸಚಿವರು ವಿವರಣೆ ನೀಡಿದ್ದಾರೆ.

ಇಲಾಖೆಗೆ ಕೆಟ್ಟ ಹೆಸರು

"ಆಯುಕ್ತರ ಆದೇಶವನ್ನು ಉಲ್ಲಂಘಿಸಿ ಆ ವಿವಾದಾತ್ಮಕ ಕೈಪಿಡಿಯನ್ನು ಶಿಕ್ಷಣ ಇಲಾಖೆಯ ವೆಬ್ ಸೈಟ್‌ಗೆ ಅಪ್ ಲೋಡ್ ಮಾಡಿರುವುದು ತೀವ್ರ ಕರ್ತವ್ಯಲೋಪವಾಗಿರುತ್ತದೆ. ಇದರಿಂದ ಶಿಕ್ಷಣ ಇಲಾಖೆಗೆ ತೀವ್ರ ಮುಜುಗರ ಉಂಟಾಗಿದಲ್ಲದೆ ಇಲಾಖೆಗೆ ಕೆಟ್ಟ ಹೆಸರು ಬಂದಿರುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಲಾಖಾ ತನಿಖೆಗೆ ಆದೇಶ

ಈ ರೀತಿ ಕರ್ತವ್ಯ ಲೋಪವನ್ನು ಇಲಾಖೆ ಸಹಿಸುವುದಿಲ್ಲ. ಆದ್ದರಿಂದ ತಮಗೆ ನೀಡಿದ ಸೂಚನೆಯನ್ನು ಉಲ್ಲಂಘಿಸಿ, ಕರ್ತವ್ಯ ಲೋಪವೆಸಗಿ ಇಲಾಖೆಗೆ ಮುಜುಗರ ಉಂಟುಮಾಡಿರುವ ಪ್ರೌಢಶಿಕ್ಷಣ ನಿರ್ದೇಶಕ ಮಣಿ ಮತ್ತು ಮೂವರು ಇತರೆ ಅಧಿಕಾರಿ ಗಳನ್ನು ಕೂಡಲೇ ಅಮಾನತು ಮಾಡಿ, ಇವರಿಂದ ಆಗಿರುವ ಕರ್ತವ್ಯಲೋಪ, ಆದೇಶ ಉಲ್ಲಂಘನೆ ಕುರಿತು ಇಲಾಖಾ ವಿಚಾರಣೆ ನಡೆಸಲು ಸೂಚಿಸಿದ್ದೇನೆ ಎಂದು ಸಚಿವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.

ವಾರ್ತಾಭಾರತಿ ವರದಿ ಫಲಶ್ರುತಿ

ಭಾರತದ ಸಂವಿಧಾನ ಹಾಗೂ ಡಾ. ಅಂಬೇಡ್ಕರ್ ಅವರ ಬಗ್ಗೆ ವಿವಾದಾತ್ಮಕ ಸೊತ್ತೋಲೆಯನ್ನು ಶಿಕ್ಷಣ ಇಲಾಖೆಯು ನ. 6ರಂದು ಹೊರಡಿಸಿತ್ತು. ಅಂಬೇಡ್ಕರ್‌ರವರ ಅಗೌರವಕ್ಕೆ ಪ್ರತಿಯಾಗಿ ಪ್ರಜಾಸತ್ತಾತ್ಮಕ ಧ್ವನಿ, ಆಕ್ರೋಶಗಳು ಕೇಳಿಬಂದ ಹಿನ್ನೆಲೆಯಲ್ಲಿ ಹಾಗೂ ಪ್ರತಿಭಟನೆಗೆ ಹೆದರಿ ಶಿಕ್ಷಣ ಇಲಾಖೆಯು ಮೂರೇ ದಿನಗಳಲ್ಲಿ ಅಂದರೆ ವಾಪಸ್ ಪಡೆದಿತ್ತು. ವಿವಾದಾತ್ಮಕ ಸೊತ್ತೋಲೆಯ ಬಗ್ಗೆ "ವಾರ್ತಾಭಾರತಿ"ಯು ನ. 11ರಂದು "ಭಾರತದ ಸಂವಿಧಾನವನ್ನು ಡಾ.ಅಂಬೇಡ್ಕರ್ ಒಬ್ಬರೇ ಬರೆದಿಲ್ಲ" ಎಂಬ ಶೀರ್ಷಿಕೆಯಡಿ ಸುತ್ತೋಲೆಯಲ್ಲಿ ಅಡಕವಾಗಿರುವ ಮಾಹಿತಿ ಹಾಗೂ ಪುಟ ಸಂಖ್ಯೆ ಸಹಿತ ಕೈಪಿಡಿಯಲ್ಲಿದ್ದ ಅಂಶಗಳನ್ನು ವಿಶೇಷ ವರದಿ ಪ್ರಕಟಿಸಿ ಸರಕಾರ, ಶಿಕ್ಷಣ ಇಲಾಖೆ ಹಾಗೂ ಸಂಬಂಧ ಆಧಿಕಾರಿಗಳ ಗಮನ ಸೆಳೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News