ಭಕ್ತಾದಿಗಳನ್ನು ಸತಾಯಿಸಿದ ಆರೋಪ : ಪುರೋಹಿತ ಅಮಾನತು

Update: 2019-11-13 16:37 GMT

ಉಪ್ಪಿನಂಗಡಿ: ಮಹಾಲಯ ಅಮವಾಸ್ಯೆಯಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳಕ್ಕೆ ಆಗಮಿಸಿದ ಭಕ್ತಾದಿಗಳನ್ನು ಸತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಲಾದ ಲಿಖಿತ ದೂರಿನನ್ವಯ ತಪ್ಪಿತಸ್ಥ ಪುರೋಹಿತರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿರುವ ಬಗ್ಗೆ  ವರದಿಯಾಗಿದೆ.

ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ಕ್ಷೇತ್ರವಾಗಿ ಮೋಕ್ಷಧಾಮವೆನಿಸಿಕೊಂಡಿರುವ  ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಗತಿಸಿದ ಬಂಧುಗಳಿಗೆ ಪಿಂಡ ಪ್ರಧಾನಾದಿ ಅಪರಕ್ರಿಯೆಗಳನ್ನು ನಡೆಸಲು ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಂತೆಯೇ ಕಳೆದ ಸೆ. 28 ರಂದು ಮಹಾಲಯ ಅಮವಾಸ್ಯೆಯ ದಿನ ಭಾರೀ ಸಂಖ್ಯೆಯ ಭಕ್ತಾಧಿಗಳು ಗತಿಸಿದ ತಮ್ಮ ಬಂಧುಗಳಿಗೆ ಪಿಂಡ ಪ್ರಧಾನಗೈಯಲು ಆಗಮಿಸಿದ್ದರು. ಈ ವೇಳೆ ಪುರೋಹಿತರೊಬ್ಬರು ಸಾಮೂಹಿಕವಾಗಿ ವಿಧಿವಿಧಾನಕ್ಕೆ ಕುಳಿತ್ತಿದ್ದು, ಭಾಗಶಃ ವಿಧಿವಿಧಾನಗಳನ್ನು ಪೂರೈಸಿದ್ದ 40 ಕ್ಕೂ ಮಿಕ್ಕಿದ ಭಕ್ತಾದಿಗಳನ್ನು ನಿರ್ಲಕ್ಷಿಸಿ, ಅವರನ್ನು ಅಲ್ಲಿಯೇ ಬಿಟ್ಟು ವಿಳಂಬವಾಗಿ ಬಂದ  ತನ್ನ ಬಂಧು - ಮಿತ್ರರಿಗೆ ಪಿಂಡ ಪ್ರಧಾನಾದಿ ಕಾರ್ಯಕ್ಕೆ ಅವಕಾಶ ನೀಡಿದ್ದರು. ಇವರ ಈ ನಡೆಯ ಬಗ್ಗೆ ಈ ಸಂದರ್ಭ ಭಕ್ತಾಧಿಗಳಿಂದ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು. ಈ ಬಗ್ಗೆ ಆ ಸಂದರ್ಭ ಘಟನಾ ಸ್ಥಳದಲ್ಲಿದ್ದ ಪತ್ರಕರ್ತರೊಬ್ಬರು ಪುರೋಹಿತರ ನಡೆಯ ದೃಶ್ಯಾವಳಿಗಳೊಂದಿಗೆ ದೇವಳದ ಆಡಳಿತಾಧಿಕಾರಿಗಳಿಗೆ ಲಿಖಿತ  ದೂರು ಸಲ್ಲಿಸಿದ್ದರು.

ಈ ದೂರನ್ನು ಆಧರಿಸಿ ದೇವಳದ ಆಡಳಿತವು ಅಪಾದಿತ ಪುರೋಹಿತರನ್ನು ಅಮಾನತುಗೊಳಿಸಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News