ಮಾತುಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ: ಉದ್ಧವ್ ಠಾಕ್ರೆ

Update: 2019-11-13 17:03 GMT

ಮುಂಬೈ, ನ. 13: ಮಹಾರಾಷ್ಟ್ರ ಕಾಂಗ್ರೆಸ್ ನಾಯಕರನ್ನು ಬುಧವಾರ ಇಲ್ಲಿ ಭೇಟಿಯಾಗಿರುವ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ರಾಜ್ಯದಲ್ಲಿ ಸರಕಾರ ರಚಿಸುವ ಕುರಿತ ಮಾತುಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.

ಉದ್ಧವ್ ಠಾಕ್ರೆ ಅವರೊಂದಿಗಿನ ಭೇಟಿಯನ್ನು ಮಹಾರಾಷ್ಟ್ರ ಕಾಂಗ್ರೆಸ್ ವರಿಷ್ಠ ಬಾಳಾ ಸಾಹೇಬ್ ಥೋರಾಟ್ ‘ಸೌಜನ್ಯದ ಭೇಟಿ’ ಎಂದು ಹೇಳಿದ್ದಾರೆ. ಅಲ್ಲದೆ, ಅವರು ಭೇಟಿಯಾಗಿದ್ದಾರೆ ಎಂಬುದು ಒಂದು ಸಕಾರಾತ್ಮಕ ಹೆಜ್ಜೆ ಎಂದಿದ್ದಾರೆ. ಉಪ ನಗರದ ಹೊಟೇಲೊಂದರಲ್ಲಿ ಠಾಕ್ರೆ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಾಣಿಕ್‌ರಾವ್ ಠಾಕ್ರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ದಿನದ ಬಳಿಕ ಈ ಮಾತುಕತೆ ನಡೆದಿದೆ.

‘‘ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಮಾತುಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಸೂಕ್ತ ಸಮಯದಲ್ಲಿ ನಿರ್ಧಾರ ಘೋಷಿಸಲಾಗುವುದು’’ ಎಂದು ಹೊಟೇಲ್‌ನಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಠಾಕ್ರೆ ಸುದ್ದಿಗಾರರಿಗೆ ತಿಳಿಸಿದರು.

ಅನಂತರ ನೂತನ ಸರಕಾರ ರಚನೆಗೆ ಮಾತುಕತೆ ಸಕಾರಾತ್ಮಕವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಥೋರಾಟ್ ಅವರು, ಉದ್ಧವ್ ಠಾಕ್ರೆ ಅವರೊಂದಿಗೆ ನಮ್ಮದು ಸೌಜನ್ಯದ ಭೇಟಿ. ನಾವು ಭೇಟಿಯಾಗಿದ್ದೇವೆ ಎಂಬುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದರು.

ಮುಂದಿನ ಮಾತುಕತೆಗೆ ಸೌಹಾರ್ದ ವಾತಾವರಣ ಸೃಷ್ಟಿಸಲು ಈ ಮಾತುಕತೆ ನಡೆಸಲಾಗಿದೆ ಎಂದು ಮಾಣಿಕ್ ರಾವ್ ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News