ತೆಲಂಗಾಣ ರಸ್ತೆ ಸಾರಿಗೆ ನೌಕರರ ಮುಷ್ಕರ 40 ದಿನಕ್ಕೆ: ಇನ್ನೋರ್ವ ಉದ್ಯೋಗಿ ಆತ್ಮಹತ್ಯೆ

Update: 2019-11-13 17:04 GMT
ಫೋಟೋ: PTI

   ಹೈದರಾಬಾದ್,ನ.12: ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ನೌಕರರ ಮುಷ್ಕರ 40ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಇನ್ನೋರ್ವ ಟಿಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಯ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಇದರೊಂದಿಗೆ ಮುಷ್ಕರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಟಿಎಸ್‌ಆರ್‌ಸಿ ನೌಕರರ ಸಂಖ್ಯೆ 5ಕ್ಕೇರಿದೆ.

 45 ವರ್ಷದ ಅವಲಾ ನರೇಶ್ ಇಂದು ಮುಂಜಾನೆ ವೇಳೆ ವಿಷ ಸೇವಿಸಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

 ಆಸ್ಪತ್ಪೆಯಿಂದ ಆರ್‌ಟಿಸಿ ಡಿಪೋದವರೆಗೆ ನಡೆದ ನರೇಶ್ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆಯಲ್ಲಿ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಉದ್ಯೋಗಿಗಳು ಹಾಗೂ ಕೆಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.

 ಉದ್ರಿಕ್ತ ಪ್ರತಿಭಟನಕಾರರು ಶವಯಾತ್ರೆಯು ಸಾಗುವ ದಾರಿಯಲ್ಲಿ ಪೊಲೀಸರು ಇರಿಸಿದ್ದ ತಡೆಬೇಲಿಗಳನ್ನು ಕಿತ್ತುಹಾಕಿದರು ಹಾಗೂ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ನರೇಶ್ ಅವರ ಪಾರ್ಥಿವ ದೇಹವನ್ನು ಇರಿಸಿ ಧರಣಿ ನಡೆಸಿದರು. ಈಗ ನಡೆಯುತ್ತಿರುವ ಮುಷ್ಕರದಿಂದ ನರೇಶ್ ವಿಚಲಿತಗೊಂಡಿದ್ದರೆಂದು ಮೂಲಗಳು ತಿಳಿಸಿವೆ. ರಸ್ತೆ ಸಾರಿಗೆ ನಿಗಮವನ್ನು ಸರಕಾರದ ಸಾರಿಗೆ ಇಲಾಖೆಯ ಜೊತೆ ವಿಲೀನಗೊಳಿಸಲು ಹಾಗೂ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 48 ಸಾವಿರಕ್ಕೂ ಅಧಿಕ ಟಿಎಸ್‌ಆರ್‌ಟಿಸಿ ಉದ್ಯೋಗಿಗಳು ಕಳೆದ 40 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಷ್ಕರದ ವಿರುದ್ಧ ಕಠಿಣ ನಿಲುವು ತಾಳಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರು ಯಾವುದೇ ಸನ್ನಿವೇಶದಲ್ಲಿಯೂ ಟಿಎಸ್‌ಆರ್‌ಟಿಸಿಯನ್ನು ಸರಕಾರದ ಜೊತೆ ವಿಲೀನಗೊಳಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News