ದಲಿತರಿಗೆ ಸಾಮಾಜಿಕ ಬಹಿಷ್ಕಾರ: ತನಿಖೆಯ ಸೂಚನೆ ನೀಡಿದ ಸುಪ್ರೀಂ ಕೋರ್ಟ್

Update: 2019-11-13 17:14 GMT

ಹೊಸದಿಲ್ಲಿ, ನ. 13: ಕೈಪಂಪ್‌ನಿಂದ ನೀರೆತ್ತುವ ಕುರಿತು ಪ್ರಬಲ ಸಮುದಾಯದೊಂದಿಗಿನ ವಾಗ್ವಾದದ ಹಿನ್ನೆಲೆಯಲ್ಲಿ ಹರ್ಯಾಣದಲ್ಲಿ ದಲಿತ ಸಮುದಾಯಕ್ಕೆ 2 ವರ್ಷಗಳ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣದ ಕುರಿತು ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.

ಈ ಪ್ರಕರಣದ ಕುರಿತು ವಿಚಾರಣೆ ನಡೆಸಬಹುದಾದ ಮೂವರು ಅಥವಾ ನಾಲ್ಕು ಮಂದಿ ಅಧಿಕಾರಿಗಳ ಹೆಸರನ್ನು ಸಿದ್ಧವಾಗಿ ಇರಿಸುವಂತೆ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದೆ. ‘‘ಪ್ರಬಲ ಸಮುದಾಯ ಅಥವಾ ದಲಿತ ಸಮುದಾಯಕ್ಕೆ ಸೇರದ ಕೆಲವು ಸ್ವತಂತ್ರ ಅಧಿಕಾರಿಗಳ ಹೆಸರನ್ನು ನೀಡಿ’’ ಎಂದು ಪೀಠ ಮೆಹ್ತಾ ಅವರಿಗೆ ತಿಳಿಸಿದೆ.

ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಗ್ರಾಮವೊಂದರಲ್ಲಿ 2017 ಜುಲೈ 2ರಿಂದ ದಲಿತ ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ವಿಧಿಸಿದ ಪ್ರಕರಣದ ಕುರಿತು ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಪೀಠ, ಅವರು ಈ ಪ್ರಕರಣದ ವಿಚಾರಣೆಯನ್ನು ಸಿಬಿಐ ನಡೆಸುವಂತೆ ಆಗ್ರಹಿಸಲು ಕಾರಣವೇನು ಎಂದು ದೂರುದಾರ ಪರ ಹಾಜರಾಗಿದ್ದ ಹಿರಿಯ ವಕೀಲ ಕೋಲಿನ್ ಗೊನ್ಸಾಲ್ವೆಸ್ ಅವರಲ್ಲಿ ಪ್ರಶ್ನಿಸಿತು. ‘‘ನೀವು ಸಿಬಿಐ ತನಿಖೆ ನಡೆಸುವಂತೆ ಕೇಳುತ್ತಿದ್ದೀರಿ. ಸಿಬಿಐ ತನಿಖೆಗೆ ಆದೇಶಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಇದರಿಂದ ನೀವು ಏನು ಪಡೆಯಲಿದ್ದೀರಿ?’’ ಎಂದು ಪೀಠ ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಗೊನ್ಸಾಲ್ವೆಸ್ ಈ ಪ್ರಕರಣದ ಕುರಿತು ರಾಜ್ಯ ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ. ಇಡೀ ಪ್ರಕ್ರಿಯೆಯಲ್ಲಿ ಅವರು ಪ್ರಬಲ ಸಮುದಾಯದ ಪರವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News