ಮೊದಲ ಎಬೋಲಾ ಲಸಿಕೆಗೆ ಡಬ್ಲ್ಯುಎಚ್‌ಒದಿಂದ ಪೂರ್ವಾನುಮತಿ

Update: 2019-11-13 18:00 GMT
ಫೋಟೋ: biospectrumindia.com

ಜಿನೀವ (ಸ್ವಿಟ್ಸರ್‌ಲ್ಯಾಂಡ್), ನ. 12: ಎಬೋಲಾ ರೋಗ ಬಾರದಂತೆ ತಡೆಯುವ ಲಸಿಕೆಗೆ ಮೊದಲ ಬಾರಿಗೆ ಪೂರ್ವಾನುಮತಿ ನೀಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮಂಗಳವಾರ ತಿಳಿಸಿದೆ. ಇದು ಲಸಿಕೆಯ ಪರವಾನಿಗೆ, ಲಭ್ಯತೆ ಮತ್ತು ಎಬೋಲಾ ರೋಗದ ಹೆಚ್ಚಿನ ಭೀತಿ ಇರುದ ದೇಶಳಿಗೆ ಪೂರೈಕೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅದು ಹೇಳಿದೆ.

‘‘ಇದು ವಿಶ್ವ ಆರೋಗ್ಯ ಸಂಸ್ಥೆ ಈವರೆಗೆ ನಿರ್ವಹಿಸಿದ ಲಸಿಕೆ ಪೂರ್ವಾನುಮತಿ ಪ್ರಕ್ರಿಯೆಗಳಲ್ಲೇ ಅತ್ಯಂತ ವೇಗದ ಪ್ರಕ್ರಿಯೆಯಾಗಿದೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ. ಪೂರ್ವಾನುಮತಿ ಎಂದರೆ ಲಸಿಕೆಯು ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿದೆ ಎಂಬುದಾಗಿ ನೀಡುವ ಪ್ರಮಾಣಪತ್ರವಾಗಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದ ಎರಡು ಪ್ರಾಂತಗಳಲ್ಲಿ ಒಟ್ಟು 3,264 ಎಬೋಲಾ ವೈರಸ್ ಕಾಯಿಲೆ ಪ್ರಕರಣಗಳು ವರದಿಯಾಗಿವೆ ಎಂದು ಡಬ್ಲುಎಚ್‌ಒ ತಿಳಿಸಿದೆ.

‘‘ಐದು ವರ್ಷಗಳ ಹಿಂದೆ ನಮ್ಮಲ್ಲಿ ಎಬೋಲಾ ಲಸಿಕೆಯಿರಲಿಲ್ಲ ಹಾಗೂ ಚಿಕಿತ್ಸೆಯಿರಲಿಲ್ಲ. ಈಗ ಪೂರ್ವಾನುಮತಿ ಪಡೆದ ಲಸಿಕೆ ಮತ್ತು ಪ್ರಾಯೋಗಿಕ ಹಂತದಲ್ಲಿರುವ ಚಿಕಿತ್ಸೆಯಿದ್ದು, ಎಬೋಲಾ ಕಾಯಿಲೆ ಈಗ ತಡೆಗಟ್ಟಬಲ್ಲ ಹಾಗೂ ಚಿಕಿತ್ಸೆಯಿರುವ ಕಾಯಿಲೆಯಾಗಿದೆ’’ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್ ಅದನೊಮ್ ಗಿಬ್ರೆಯೆಸಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News