ಬಲೂಚಿಸ್ತಾನದಲ್ಲಿ ಪಾಕ್‌ನಿಂದ ಮಾನವಹಕ್ಕು ಉಲ್ಲಂಘನೆ: ಭಾರತದ ನೆರವು ಕೋರಿದ ಬಲೂಚ್ ಹೋರಾಟಗಾರರು

Update: 2019-11-14 17:28 GMT

ಲಂಡನ್, ನ. 14: ‘ಪಾಕಿಸ್ತಾನದ ಕೇಡಿ ಸರಕಾರ’ ಬಲೂಚಿಸ್ತಾನದಲ್ಲಿ ನಡೆಸುತ್ತಿರುವ ದೌರ್ಜನ್ಯಗಳಿಗೆ ಪ್ರಚಾರ ನೀಡುವಂತೆ ಹಾಗೂ ಬಲೂಚಿಸ್ತಾನ ಸ್ವಾತಂತ್ರ ಚಳವಳಿಗೆ ಸಹಾಯ ಮಾಡುವಂತೆ ಬಲೂಚ್ ನ್ಯಾಶನಲ್ ಮೂವ್‌ಮೆಂಟ್ (ಬಿಎನ್‌ಎಂ)ನ ಬ್ರಿಟನ್ ಘಟಕಕ ಮತ್ತು ಅದರ ಸಹ ಸಂಘಟನೆಗಳು ಭಾರತ ಸರಕಾರಕ್ಕೆ ಕರೆ ನೀಡಿವೆ.

ಬಲೂಚ್ ಹುತಾತ್ಮರ ದಿನದ ಸಂದರ್ಭದಲ್ಲಿ ಲಂಡನ್‌ನಲ್ಲಿ ಬುಧವಾರ ಏರ್ಪಡಿಸಿದ ಸ್ಮಾರಕ ಕಾರ್ಯಕ್ರಮವೊಂದರಲ್ಲಿ ಬಲೂಚ್ ನ್ಯಾಶನಲ್ ಮೂವ್‌ಮೆಂಟ್ ಹಾಗೂ ವರ್ಲ್ಡ್ ಸಿಂಧಿ ಕಾಂಗ್ರೆಸ್ ಮತ್ತು ಬಲೂಚ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಆಝಾದ್ ಮುಂತಾದ ಗುಂಪುಗಳ ಸದಸ್ಯರು ಭಾರತ ಸರಕಾರಕ್ಕೆ ಈ ಮನವಿಯನ್ನು ಮಾಡಿದರು.

ಅದೇ ವೇಳೆ, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಬಗ್ಗೆ ಮೌನವಾಗಿರುವ ಬ್ರಿಟನ್ ಸರಕಾರ ‘ಆಷಾಢಭೂತಿ’ಯಾಗಿದೆ ಎಂದು ಬಣ್ಣಿಸಿದರು.

‘‘ಕಳೆದ ಎರಡು ದಶಕಗಳಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು 20,000ಕ್ಕೂ ಅಧಿಕ ಬಲೂಚಿ ಜನರನ್ನು ಅಪಹರಿಸಿವೆ ಹಾಗೂ ಹಲವಾರು ಮಂದಿಯನ್ನು ಕೊಂದಿದೆ. ಪಾಕಿಸ್ತಾನದ ಭದ್ರತಾ ಪಡೆಗಳು ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಬೇಕೆನ್ನುವುದು ಭಾರತ ಸರಕಾರಕ್ಕೆ ನಾವು ಮಾಡುತ್ತಿರುವ ಮನವಿಯಾಗಿದೆ’’ ಎಂದು ಬಲೂಚ್ ನ್ಯಾಶನಲ್ ಮೂವ್‌ಮೆಂಟ್‌ನ ವಿದೇಶ ವ್ಯವಹಾರಗಳ ವಕ್ತಾರ ಹಮ್ಮಲ್ ಹೈದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News