ಮೊಸಳೆಯೊಡನೆ ಕಾದಾಡಿ ತಂಗಿಯ ಪ್ರಾಣವುಳಿಸಿದ ಬಾಲಕ

Update: 2019-11-15 13:11 GMT
ಸಾಂದರ್ಭಿಕ ಚಿತ್ರ

ಮನಿಲಾ: ಫಿಲಿಪ್ಪೀನ್ಸ್ ದೇಶದ ಪಲವಾನ್ ಎಂಬಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಜೀವದ ಹಂಗು ತೊರೆದು ಮೊಸಳೆಯೊಂದಿಗೆ ಸೆಣಸಾಡಿ ತನ್ನ ತಂಗಿಯ ಪ್ರಾಣ ಉಳಿಸಿದ್ದಾನೆ.

ಹಾಶಿಂ ತನ್ನ ಸೋದರಿ 12 ವರ್ಷದ ಹೈನಾ ಲಿಸಾ ಜೋಸ್ ಹಬಿ ಜತೆಗೆ ಹಳ್ಳವೊಂದನ್ನು ದಾಟುತ್ತಿರುವ ವೇಳೆ ಈ ಘಟನೆ ನಡೆದಿದೆ. ಹಾಶಿಂ ಮೊದಲು ದಡ ಮುಟ್ಟಿದ್ದ. ಹೈನಾ ಇನ್ನೇನು ದಡ ಮುಟ್ಟಬೇಕೆನ್ನುವಷ್ಟರಲ್ಲಿ  ಮೊಸಳೆಯೊಂದು ಛಂಗನೆ ಹಾರಿ ಆಕೆಯ ಕಾಲನ್ನು ಹಿಡಿದಿತ್ತು. ಆಕೆ ಬೊಬ್ಬೆ ಹೊಡೆದಾಗ ಪ್ರಸಂಗಾವಧಾನತೆ ಮೆರೆದ ಹಾಶಿಂ ಕೈಗೆ ಸಿಕ್ಕ ಕಲ್ಲುಗಳಿಂದ ಅದಕ್ಕೆ ಹೊಡೆಯಲಾರಂಭಿಸಿ ತನ್ನ ಸೋದರಿಯನ್ನು ಅದರ ಕಪಿಮುಷ್ಠಿಯಿಂದ ಪಾರು ಮಾಡಿದ.

ಘಟನೆಯಲ್ಲಿ ಹೈನಾಳ ಕಾಲಿಗೆ ಬಲವಾದ ಗಾಯವಾಗಿದ್ದರೂ ಆಕೆ ಅಪಾಯದಿಂದ ಪಾರಾಗಿದ್ದಾಳೆ. ಘಟನೆಯ ನಂತರ ಹಾಶಿಂ ಎಲ್ಲರಿಂದಲೂ ಹೀರೋ ಎಂದು ಶ್ಲಾಘನೆಗೊಳಗಾಗಿದ್ದಾನೆ.

"ಆ ಮೊಸಳೆ ನನಗಿಂತಲೂ ದೊಡ್ಡದಿತ್ತು. ನನಗೆ ಭಯವಾಯಿತು, ಬೊಬ್ಬೆ ಹೊಡೆದೆ ಅದರ ಹಲ್ಲುಗಳು ಹಾಗೂ ಅದರ ಬಾಯಿಯೊಳಗೆ ಕೂಡ ನೋಡಿದೆ,'' ಎಂದು ಹೈನಾ ಘಟನೆಯನ್ನು ನೆನಪಿಸಿಕೊಳ್ಳುತ್ತಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News