ಕನಕದಾಸರು ಇಂದಿಗೂ ಪ್ರಸ್ತುತ: ಜಿಲ್ಲಾಧಿಕಾರಿ ಜಗದೀಶ್

Update: 2019-11-15 14:18 GMT

ಉಡುಪಿ, ನ.15: ಕನಕದಾಸರ ಕೀರ್ತನೆಗಳು, ತತ್ವಗಳನ್ನು ಅರಿಯವುದರ ಮೂಲಕ ಸಮಾಜದಲ್ಲಿ ಎಲ್ಲಾ ಸಮುದಾಯಗಳ ಜನರು ಶಾಂತಿ ಸಹಬಾಳ್ವೆ ಯಿಂದ ಬಾಳಲು ಸಾದ್ಯವಿದೆ. ಈ ಮೂಲಕ 500 ವರ್ಷಗಳ ಹಿಂದೆ ಜನಿಸಿದ ಕನಕದಾಸರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಶ್ರೀಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತಿದ್ದರು.

ಹಿಂದುಳಿದ ವರ್ಗದಲ್ಲಿ ಜನಿಸಿದ ಕನಕದಾಸರು ಇಡೀ ಮಾನವ ಕುಲದ ಸುಧಾರಣೆಗೆ ಪ್ರಯತ್ನಿಸಿದ್ದು ನೆನೆದರೆ ರೋಮಾಂಚನವಾಗುತ್ತದೆ. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಅವರ ಕೀರ್ತನೆ ಇಡೀ ಮಾನವ ಸಮಾಜವನ್ನೇ ತಿದ್ದಿ, ಸರಿಯದ ಹಾದಿಯಲ್ಲಿ ಮುನ್ನಡೆಸಲಿದೆ. ಕನಕದಾಸರ ಕೀರ್ತನೆಗಳು, ಮುಂಡಿಗೆಗಳು ಮಾನವ ಜೀವನ ಹೇಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಎನ್ನುವುದನ್ನು ತಿಳಿಸುತ್ತವೆ. ಅವರ ಚಿಂತನೆ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್ ನುಡಿದರು.

ಕನಕದಾಸರು ಜನಿಸಿದ ಜಿಲ್ಲೆಯಲ್ಲಿಯೇ ನಾನು ಮೊದಲು ಎಸಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಹಾವೇರಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ, ನಂತರ ಕನಕದಾಸರಿಗೆ ಸಂಬಂಧವಿರುವ ಉಡುಪಿ ಜಿಲ್ಲೆಯಲ್ಲಿಯೇ ಜಿಲ್ಲಾಧಿಕಾರಿ ಯಾಗಿದ್ದೇನೆ. ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಕಾರ್ಯದಲ್ಲಿ ಸಹ ಕರ್ತವ್ಯ ನಿರ್ವಹಿದ್ದೇನೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.

ಕನಕದಾಸರ ಕುರಿತು ಉಪನ್ಯಾಸ ನೀಡಿದ ನಿವೃತ ಉಪನ್ಯಾಸಕ ಮೇಟಿ ಮುದಿಯಪ್ಪ, ದಾಸರಲ್ಲಿ ಶ್ರೇಷ್ಠರಾದ ಕನಕದಾಸರು ಒಬ್ಬ ರಾಷ್ಟ್ರ ಸಂತರು. ಅವರ ಕೀರ್ತನೆಗಳು ಗ್ರಾಮೀಣ ಜನತೆಗೂ ಸಹ ಸುಲಭದಲ್ಲಿ ಅರ್ಥವಾಗುತ್ತವೆ. ಆದರೆ ಅವರ ಮುಂಡಿಗೆಗಳು ಗೂಡಾರ್ಥದಿಂದ ಕೂಡಿವೆ. ಜಾತಿ, ಮತ, ವೈಯಕ್ತಿಕ ಪ್ರತಿಷ್ಠೆಗಳು ಮಾನವನ ಅಹಂಕಾರಕ್ಕೆ ಕಾರಣ ಎನ್ನುವುದನ್ನು ತಿಳಿಸಿದ ಇವರು, ಮನುಕುಲದ ಉನ್ನತೀಕರಣಕ್ಕೆ ಪ್ರಯತ್ನಿಸಿದ್ದಾರೆ. ದೇವರನ್ನು ಎಲ್ಲಿಯೋ ಹುಡುಕಬೇಕಿಲ್ಲ, ನಿಮ್ಮ ಒಳಗಣ್ಣು ತೆರೆದರೆ ಭಗವಂತ ಕಾಣುತ್ತಾನೆ ಎಂದು ತಿಳಿಸಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿಕುಮಾರಚಂದ್ರ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News