ಮಂಗಳೂರು : ಟಿಆರ್‌ಎಫ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ

Update: 2019-11-15 14:41 GMT

ಮಂಗಳೂರು, ನ.15: ದೇಶದ ಪ್ರಪ್ರಥಮ ಶಿಕ್ಷಣ ಸಚಿವ, ಸ್ವಾತಂತ್ರ ಹೋರಾಟಗಾರ, ಶಿಕ್ಷಣ ಪ್ರೇಮಿ, ಚಿಂತಕ, ಭಾರತರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಜನ್ಮದಿನದ ಅಂಗವಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯು ಶುಕ್ರವಾರ ಟಿಆರ್‌ಎಫ್ ಸಭಾಂಗಣದಲ್ಲಿ ಜರುಗಿತು.

ಈ ಸಂದರ್ಭ ಅಬುಲ್ ಕಲಾಂ ಆಝಾದ್ ಅವರ ಕುರಿತಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಏರ್ಪಡಿಸಲಾಗಿದ್ದ ರಸಪ್ರಶ್ನೆ, ಕವನ, ಚಿತ್ರಕಲೆ, ಪ್ರಬಂಧ ರಚಿಸಿ ಭಾಷಣ ಮಾಡುವ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಧಿಕಾರಿ ಡಾ. ಪ್ರಶಾಂತ್ ಕೆ.ಎಸ್. ‘6ರಿಂದ 14 ವರ್ಷ ಪ್ರಾಯದೊಳಗಿನ ಸರ್ವರಿಗೂ ಶಿಕ್ಷಣ ನೀಡಬೇಕು ಎಂಬ ಕಲ್ಪನೆಯ ಹಿಂದೆ ದೇಶದ ಪ್ರಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್‌ರ ಶ್ರಮ ಅಪಾರವಾಗಿತ್ತು. ಅಂತಹ ದೇಶಭಕ್ತ ಶಿಕ್ಷಣ ಪ್ರೇಮಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ಇಂದಿನ ಮಕ್ಕಳಲ್ಲಿ ನೈತಿಕ ಮೌಲ್ಯ ಕಾಣುತ್ತಿಲ್ಲ. ಶಿಕ್ಷಣದ ಅರ್ಥ ಏನು ಎಂಬುದೂ ಗೊತ್ತಿಲ್ಲ. ಸ್ವಾರ್ಥಮಯ ಬದುಕು ಹೆಚ್ಚುತ್ತಿವೆ. ಸಂವೇದನಾಶೀಲತೆ ಕಡಿಮೆಯಾಗುತ್ತಿದೆ ಎಂದು ಡಾ. ಪ್ರಶಾಂತ್ ಕೆ.ಎಸ್. ವಿಷಾದಿಸಿದರು.

ಮೌಲಾನಾ ಅಬುಲ್ ಕಲಾಂ ಆಝಾದ್ ಕುರಿತು ಉಪನ್ಯಾಸ ನೀಡಿದ ಲೇಖಕ ಇಸ್ಮತ್ ಪಜೀರ್ ಕೇಂದ್ರ ಸರಕಾರವು ಆಝಾದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲು ಆದೇಶಿಸಿದ್ದರೂ ಕೂಡಾ ಯಾವೊಂದು ಶಿಕ್ಷಣ ಸಂಸ್ಥೆಯಲ್ಲೂ ಆಚರಿಸಲಾಗುತ್ತಿಲ್ಲ. ಯುವ ಪೀಳಿಗೆಗೆ ಅವರ ವ್ಯಕ್ತಿತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತಿಲ್ಲ. ಕನಿಷ್ಠ ಶಿಕ್ಷಣ ಸಂಸ್ಥೆಗಳ ಕೊಠಡಿಗಳಲ್ಲಿ ಆಝಾದ್‌ರ ಫೋಟೋವನ್ನೂ ಅಳವಡಿಸುತ್ತಿಲ್ಲ. ಇದು ಮೌಲಾನಾ ಆಝಾದ್‌ರಿಗೆ ಮಾಡುವ ಅವಮಾನವಾಗಿದೆ ಎಂದರು.

ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು, ಹಿರಿಯ ಸಮಾಜ ಸೇವಕ ಜೋಯ್ ಗೊನ್ಸಾಲ್ವಿಸ್, ಉಳ್ಳಾಲ ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲ ಅಬ್ದುರ್ರಹ್ಮಾನ್, ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ ಭಾಗವಹಿಸಿ ಮಾತನಾಡಿದರು.

ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ನಕಾಶ್ ಬಾಂಬಿಲ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಮಜೀದ್ ತುಂಬೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News