ಮಂಗಳೂರು: ಸಂತ ಕನಕದಾಸ ಜಯಂತಿ ಆಚರಣೆ

Update: 2019-11-15 14:57 GMT

ಮಂಗಳೂರು, ನ.15: ದ.ಕ. ಜಿಲ್ಲಾಡಳಿತ, ದ.ಕ. ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ಕನಕದಾಸ ಜಯಂತಿ ಕಾರ್ಯಕ್ರಮ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್‌ಕುಮಾರ್ ಕಟೀಲು ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯನಾಗಿ ಬೆಳೆದ ಸಂತ ಕನಕದಾಸರು ನಮಗೆಲ್ಲರಿಗೂ ಆದರ್ಶಪ್ರಾಯರು. ಭಕ್ತಿಮಾರ್ಗದಿಂದ ದೇವರನ್ನು ಒಲಿಸಿಕೊಂಡ ಕನಕದಾಸರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಚರಾಚರ ಜೀವಿಗಳಲ್ಲಿಯೂ ಭಗವಂತನನ್ನು ಕಂಡ ಭಾರತ ಶ್ರೇಷ್ಠವಾದ ದೇಶ. ದೇವರು ನಡೆದಾಡಿದ ಪುಣ್ಯಭೂಮಿ ಇದು. ಭಗವಂತನ ಅನುಬಂಧದಿಂದ ಸಂತರಾದ ಕನಕದಾಸರು, ಬಾಲ್ಯದಲ್ಲಿ ಗುರುಗಳಿಗೂ ದೇವರ ದರ್ಶನ ಮಾಡಿಸಿದ್ದರು. ಸಾಹಿತ್ಯ ರಚನೆಗಳ ಮೂಲಕ ದೇವಭಕ್ತಿಯನ್ನು ಪರಿಚಯಿಸಿದ ಕನಕದಾಸರ ಸಂದೇಶ ಅನುಕರಣೀಯ ಎಂದು ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಭಕ್ತಿಮಾರ್ಗದಿಂದ ದೇವರನ್ನು ಕಾಣಲು ಸಾಧ್ಯ ಎಂದು ತೋರಿಸಿಕೊಟ್ಟ ಕನಕದಾಸರನ್ನು ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು. ಅಂಕಣಕಾರ್ತಿ ಕವಿತಾ ಅಡ್ಡೂರು ವಿಶೇಷ ಉಪನ್ಯಾಸ ನೀಡಿದರು. ಶಾಸಕ ಡಾ. ವೈ. ಭರತ್ ಶೆಟ್ಟಿ, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್, ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಪಾಲಿಕೆಯ ಆಯುಕ್ತ ಅಜಿತ್‌ಕುಮಾರ್ ಹೆಗ್ಡೆ ಎಸ್., ಮಂಗಳೂರು ತಹಶೀಲ್ದಾರ್ ಟಿ. ಜಿ. ಗುರುಪ್ರಸಾದ್, ಕರಾವಳಿ ಕುರುಬರ ಸಂಘದ ಅಧ್ಯಕ್ಷ ಮಂಜು ನೋಟಗಾರ, ಹಾಲುಮತ ಮಹಾಸಭಾದ ಅಧ್ಯಕ್ಷ ರಂಗಪ್ಪ ಎಂ. ನಡಕಟ್ಟಿ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕನಕ ನೌಕರರ ಒಕ್ಕೂಟದ ಅಧ್ಯಕ್ಷ ನಾಗರಾಜ್, ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಅಧ್ಯಕ್ಷ ಧನು ಬಿ. ಆರ್. ಗೌಡರ್, ಕರ್ನಾಟಕ ಪ್ರದೇಶ ಕುರುಬರ ಪದವೀಧರರ ಸಂಘದ ಅಧ್ಯಕ್ಷ ತುಳಸಿರಾಜ್ ನೋಟಗಾರ್ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News