ಫೇಸ್‌ಬುಕ್ ಬಳಕೆದಾರರ ದತ್ತಾಂಶ ಮಾಹಿತಿ ಕೋರಿಕೆಯಲ್ಲಿ ಹೆಚ್ಚಳ

Update: 2019-11-15 15:23 GMT

ವಾಶಿಂಗ್ಟನ್, ನ. 15: ಕಳೆದ ವರ್ಷದ ಕೊನೆಯಾರ್ಧಕ್ಕೆ ಹೋಲಿಸಿದರೆ, ಈ ವರ್ಷದ ಪ್ರಥಮಾರ್ಧದಲ್ಲಿ ಫೇಸ್‌ಬುಕ್ ಬಳಕೆದಾರರ ದತ್ತಾಂಶಕ್ಕಾಗಿ ಸರಕಾರಗಳು ಸಲ್ಲಿಸಿರುವ ಬೇಡಿಕೆಗಳಲ್ಲಿ 16 ಶೇಕಡ ಹೆಚ್ಚಳವಾಗಿದೆ ಎಂದು ಪಾರದರ್ಶಕತೆ ವರದಿಯಲ್ಲಿ ಫೇಸ್‌ಬುಕ್ ತಿಳಿಸಿದೆ.

ಜಾಗತಿಕವಾಗಿ ಜನವರಿಯಿಂದ ಜೂನ್‌ವರೆಗೆ ಬಳಕೆದಾರರ ದತ್ತಾಂಶಗಳಿಗಾಗಿ ಸರಕಾರಗಳಿಂದ 1,28,617 ಬೇಡಿಕೆಗಳು ಬಂದಿವೆ. ಇದು ಫೇಸ್‌ಬುಕ್‌ನ ಮೊದಲ ಪಾರದರ್ಶಕತೆ ವರದಿಯು 2013ರಲ್ಲಿ ಹೊರಬಂದಂದಿನಿಂದ ಅತಿ ಹೆಚ್ಚು ಸಂಖ್ಯೆಯ ಬೇಡಿಕೆಗಳಾಗಿವೆ.

ಅತಿ ಹೆಚ್ಚು ಸಂಖ್ಯೆಯ ಬೇಡಿಕೆಗಳು ಅಮೆರಿಕದಿಂದ ಬಂದಿವೆ ಹಾಗೂ ಈ ಪೈಕಿ ಹೆಚ್ಚಿನ ಬೇಡಿಕೆಗಳನ್ನು, ಬಳಕೆದಾರರಿಗೆ ಈ ಬಗ್ಗೆ ತಿಳಿಸಬಾರದು ಎಂಬ ಆದೇಶದೊಂದಿಗೆ ಸಲ್ಲಿಸಲಾಗಿದೆ ಎಂದು ಅರ್ಧ ವಾರ್ಷಿಕ ವರದಿ ತಿಳಿಸಿದೆ.

ತನ್ನ ಪ್ರಜೆಗಳ ಬಗ್ಗೆ ಮಾಹಿತಿ ಕೋರಿದ ಎರಡನೇ ಅತಿ ದೊಡ್ಡ ದೇಶ ಭಾರತವಾಗಿದೆ. 2019ರ ಮೊದಲಾರ್ಧದಲ್ಲಿ ಅಮೆರಿಕ ಸರಕಾರವು ಫೇಸ್‌ಬುಕ್ ಬಳಕೆದಾರರ ದತ್ತಾಂಶ ಕೋರಿ 50,714 ಕೋರಿಕೆಗಳನ್ನು ಸಲ್ಲಿಸಿದೆ.

ಇದೇ ಅವಧಿಯಲ್ಲಿ ಭಾರತವು, ಫೇಸ್‌ಬುಕ್ ಬಳಕೆದಾರರ ದತ್ತಾಂಶಗಳನ್ನು ಕೋರಿ 22,684 ಮನವಿಗಳನ್ನು ಸಲ್ಲಿಸಿದೆ. ಅದು ಕಳೆದ ವರ್ಷದ ಜುಲೈ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ 20,805 ಮನವಿಗಳನ್ನು ಸಲ್ಲಿಸಿತ್ತು.

ಜಾಗತಿಕ ಮಟ್ಟದಲ್ಲಿ ಒಟ್ಟು ಬೇಡಿಕೆಗಳ ಪ್ರಮಾಣದಲ್ಲಿ ಸುಮಾರು 37 ಶೇಕಡ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News