ನ.17: ಮುನ್ನೂರು ಗ್ರಾಮಡೊಂಜಿ ಗೌಜಿ

Update: 2019-11-15 15:27 GMT

ಮಂಗಳೂರು, ನ.15: ಆಧುನೀಕರಣ ಅಬ್ಬರಕ್ಕೆ ಗ್ರಾಮೀಣ ಕ್ರೀಡೆ ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಇಂದಿನ ಮಕ್ಕಳಿಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ, ಜನಪದೀಯ ಇತಿಹಾಸವುಳ್ಳ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮತ್ತು ಗ್ರಾಮೀಣ ಕ್ರೀಡೆಯಿಂದ ಎಲ್ಲಾ ಜಾತಿ, ಧರ್ಮದ ಜನರನ್ನು ಒಗ್ಗೂಡಿಸಿ ಗ್ರಾಮದಲ್ಲಿ ಸೌಹಾರ್ದ ಮೂಡಿಸುವ ಉದ್ದೇಶದಿಂದ ‘ಸೌಹಾರ್ದ ಕಲಾವಿದರು ಕುತ್ತಾರ್ ಮತ್ತು ಜೈಹನುಮಾನ್ ಕ್ರೀಡಾ ಮಂಡಳಿಯ ಜಂಟಿ ಸಹಯೋಗದಲ್ಲಿ ಮುನ್ನೂರು ಗ್ರಾಮಡೊಂಜಿ ಗೌಜಿ ಕಾರ್ಯಕ್ರಮವು ನ.17ರಂದು ಕುತ್ತಾರಿನ ದೆಪ್ಪಲಿಮಾರು ಗದ್ದೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ರೀಡೆಗಳಾದ ಕೆಸರು ಗದ್ದೆ ಓಟ, ಕೆಸರಿನಲ್ಲಿ ಮೂರು ಕಾಲಿನ ಓಟ, ಮೀನು ಹಿಡಿಯುವುದು, ಮಡಕೆ ಒಡೆಯುವುದು, ಸೋಗೆ ಎಳೆಯುವುದು, ಅಕ್ಕಿ ಮುಡಿ ಕಟ್ಟುವುದು, ಬೈಹುಲ್ಲಿನಿಂದ ಹಗ್ಗ ತಯಾರಿ, ತೆಂಗಿನ ಗರಿಯಿಂದ ಆಕೃತಿ ರಚನೆ, ಮಣ್ಣಿನಿಂದ ಆಕೃತಿ ರಚನೆ, ಬುಟ್ಟಿ ಹೆಣೆಯುವುದು, ತೆಂಗಿನ ಗರಿ ಹೆಣೆಯುವುದು, ನಿಧಿ ಶೋಧ, ಕೆಸರಿನಲ್ಲಿ ಹಗ್ಗಜಗ್ಗಾಟ, ಕೆಸರಿನಲ್ಲಿ ಚೆಂಡೆಸೆತ ಹೀಗೆ ಹಲವು ಬಗ್ಗೆ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ವಿಶೇಷ ಮನರಂಜನೆಗಾಗಿ ಕೋಣಗಳ ಓಟ, ಗ್ರಾಮೀಣ ಬದುಕಿನಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳ ಪ್ರದರ್ಶನವಿದೆ. ಗ್ರಾಮೀಣ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮಾದಿರ, ಡೊಲ್ಲುಕುಣಿತ, ದೊಲ್ನಲಿಕೆ, ಕುಡುಬಿ ಜನಾಂಗದ ನೃತ್ಯ, ಚೆಂಡೆ, ದಫ್, ಕೊಂಕಣಿ ನೃತ್ಯ ಹೀಗೆ ಎಲ್ಲಾ ಧರ್ಮೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಗ್ರಾಮೀಣ ಶೈಲಿಯ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಗೌಜಿಗೆ ತುಳು, ಕನ್ನಡ ಸಿನೆಮಾದ ಕಲಾವಿದರು, ತುಳು ರಂಗಭೂಮಿಯ ಕಲಾವಿದರು, ಅಂತರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಆಟಗಾರರು, ಸಾಹಿತಿಗಳು, ಬುದ್ದಿಜೀವಿಗಳು, ಬರಹಗಾರರುವ ಆಗಮಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News