ಮಕ್ಕಳನ್ನು ಡಿಜಿಟಲ್ ಜಗತ್ತಿನ ಅನಿಷ್ಠಗಳಿಂದ ಕಾಪಾಡಬೇಕು: ಪೋಪ್

Update: 2019-11-15 15:27 GMT

ವ್ಯಾಟಿಕನ್ ಸಿಟಿ, ನ. 15: ಇಂಟರ್‌ನೆಟ್ ಸಂಪರ್ಕ ಪಡೆಯುವಾಗ ಯುವಜನರು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಪೋಪ್ ಫ್ರಾನ್ಸಿಸ್ ಎಚ್ಚರಿಕೆ ನೀಡಿದ್ದಾರೆ ಹಾಗೂ ರಕ್ಷಣಾ ಕ್ರಮಗಳಿಗೆ ಒತ್ತು ನೀಡುವಂತೆ ಡಿಜಿಟಲ್ ಕಂಪೆನಿಗಳಿಗೆ ಕರೆ ನೀಡಿದ್ದಾರೆ.

‘‘ಸೇವೆಗಳನ್ನು ಒದಗಿಸುವ ಕಂಪೆನಿಗಳನ್ನು ಕೇವಲ ತಂತ್ರಜ್ಞಾನ ವೇದಿಕೆಗಳನ್ನು ಒದಗಿಸುವವವರು ಎಂಬುದಾಗಿ ಪರಿಗಣಿಸಲಾಗಿದೆ. ಈ ಸೇವೆಗಳ ಬಳಕೆಗೆ ಅವರು ಕಾನೂನು ಪ್ರಕಾರವಾಗಲಿ ನೈತಿಕವಾಗಲಿ ಜವಾಬ್ದಾರರಲ್ಲ’’ ಎಂದು ಗುರುವಾರ ಫೇಸ್‌ಬುಕ್, ಗೂಗಲ್ ಮತ್ತು ಅಮೆಝಾನ್ ಮುಂತಾದ ತಂತ್ರಜ್ಞಾನ ಕಂಪೆನಿಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಪೋಪ್ ಹೇಳಿದರು ಎಂದು ‘ಎಫೆ’ ನ್ಯೂಸ್ ವರದಿ ಮಾಡಿದೆ.

ಡಿಜಿಟಲ್ ಜಗತ್ತಿನಲ್ಲಿ ಮಕ್ಕಳನ್ನು ರಕ್ಷಿಸುವ ವ್ಯಾಟಿಕನ್ ವೇದಿಕೆಯ ಭಾಗವಾಗಿ ಈ ಸಭೆಯನ್ನು ಏರ್ಪಡಿಸಲಾಗಿತ್ತು.

ತಮ್ಮ ವೆಬ್‌ಸೈಟ್‌ಗಳನ್ನು ಜನರು ಹೇಗೆ ಬಳಸುತ್ತಿದ್ದಾರೆ ಎನ್ನುವುದು ತಮಗೆ ಗೊತ್ತಿಲ್ಲ ಎಂದು ಡಿಜಿಟಲ್ ಕಂಪೆನಿಗಳು ಹೇಳುವಂತಿಲ್ಲ ಎಂದು ಅವರು ಹೇಳಿದರು.

‘‘ಮಕ್ಕಳು ನೀಲಿಚಿತ್ರಗಳ ವೆಬ್‌ಸೈಟ್‌ಗಳಿಗೆ ತಲುಪುವುದನ್ನು ತಡೆಯಲು, ಮೊಬೈಲ್ ಫೋನ್‌ನಲ್ಲಿ ಇಂಟರ್‌ನೆಟ್ ಒದಗಿಸುವ ಕಂಪೆನಿಗಳು ತಮ್ಮ ಬಳಕೆದಾರರ ಪ್ರಾಯವನ್ನು ಖಚಿತಪಡಿಸುವುದು ಅಗತ್ಯವಾಗಿದೆ’’ ಎಂದುದ ಪೋಪ್ ಫ್ರಾನ್ಸಿಸ್ ಹೇಳಿದರು.

ಮಕ್ಕಳು ಸರಾಸರಿ 11ನೇ ವರ್ಷ ವಯಸ್ಸಿನಲ್ಲಿ ನೀಲಿಚಿತ್ರಗಳ ಸಂಪರ್ಕಕ್ಕೆ ಬರುತ್ತಾರೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News