ಶ್ರೀಲಂಕಾ: ಇನ್ನೂ 267 ಕೈದಿಗಳಿಗೆ ಕ್ಷಮಾದಾನ ನೀಡಿದ ಅಧ್ಯಕ್ಷರು

Update: 2019-11-15 15:45 GMT

ಕೊಲಂಬೊ, ನ. 15: 65 ವರ್ಷಕ್ಕಿಂತ ಹೆಚ್ಚಿನ ಪ್ರಾಯದ 250ಕ್ಕೂ ಅಧಿಕ ಕೈದಿಗಳಿಗೆ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಕ್ಷಮಾದಾನ ನೀಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಸ್ವೀಡನ್‌ನ ಹದಿಹರೆಯದ ಬಾಲಕಿಯೊಬ್ಬಳನ್ನು ಕೊಂದು ಗಲ್ಲು ಶಿಕ್ಷೆಯನ್ನು ಎದುರು ನೋಡುತ್ತಿದ್ದ ಪ್ರಭಾವಿ ವ್ಯಕ್ತಿಯೊಬ್ಬನಿಗೆ ಅಧ್ಯಕ್ಷರು ಕೆಲವು ದಿನಗಳ ಹಿಂದೆ ಕ್ಷಮಾದಾನ ನೀಡಿದ್ದರು. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಇನ್ನಷ್ಟು ಕೈದಿಗಳಿಗೆ ಕ್ಷಮಾದಾನ ನೀಡಲಾಗಿದೆ.

ಶ್ರೀಲಂಕಾದ ಶ್ರೀಮಂತ ಹಾಗೂ ಪ್ರಭಾವಿ ಕುಟುಂಬವೊಂದರ ಸದಸ್ಯ ಜೂಡ್ ಜಯಮಾಹನಿಗೆ ಸ್ವೀಡನ್‌ನ ತರುಣಿಯನ್ನು ಕೊಂದ ಪ್ರಕರಣದಲ್ಲಿ ನ್ಯಾಯಾಲಯವು 2005ರಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಅವನಿಗೆ ಸಿರಿಸೇನ ಕ್ಷಮಾದಾನ ನೀಡಿದ ಬಳಿಕ, ಶನಿವಾರ ಜೈಲಿನಿಂದ ಹೊರನಡೆದನು.

ಅವನಿಗೆ ಕ್ಷಮಾದಾನ ನೀಡಿರುವ ಬಗ್ಗೆ ಬಲಿಪಶುವಿನ ಕುಟುಂಬ, ಮಾನವಹಕ್ಕು ಸಂಘಟನೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿರುವ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅದೂ ಅಲ್ಲದೆ, ದೇಶದ ಪ್ರಮುಖ ಅತಿ ಭದ್ರತೆಯ ಜೈಲಿನಲ್ಲಿ ಕೈದಿಗಳು ಬಂಡಾಯ ಎದ್ದಿದ್ದರು. ತಮ್ಮನ್ನೂ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದರು.

ತನ್ನ ವಿರುದ್ಧದ ಆಕ್ರೋಶವನ್ನು ತಣಿಸುವ ಕ್ರಮವಾಗಿ, 65 ವರ್ಷಕ್ಕಿಂತ ಹೆಚ್ಚಿನ 267 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ.

ಶ್ರೀಲಂಕಾದಲ್ಲಿ ಶನಿವಾರ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಬಳಿಕ ಸಿರಿಸೇನ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News