‘ವ್ಯಾಟಿಕನ್, ಮಕ್ಕಾ ಥರ ರಾಮಮಂದಿರ ನಿರ್ಮಾಣಗೊಳ್ಳಲಿ’

Update: 2019-11-15 16:57 GMT

ಉಡುಪಿ, ನ.15: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುವ ಮಂದಿರ ಕೇವಲ ರಾಮಮಂದಿರವಾಗಿರದೇ ವೈದಿಕ ಜ್ಞಾನ ಪರಂಪರೆಯ ಪ್ರತೀಕವಾಗಿರಲಿ. ವ್ಯಾಟಿಕನ್, ಮಕ್ಕಾ ಥರ ರಾಮಮಂದಿರ ರೂಪುಗೊಳ್ಳಬೇಕು. ಅದು ಸಮಸ್ತ ಹಿಂದೂಗಳ ಮಹಾ ತೀರ್ಥ ಕ್ಷೇತ್ರವಾಗಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ಹರಿದ್ವಾರದ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ಮುಂದಿನ ಐದು ದಿನಗಳ ಕಾಲ ಪರ್ಯಾಯ ಪಲಿಮಾರು ಮಠ ಹಾಗೂ ಪತಂಜಲಿ ಯೋಗ ಪೀಠದ ವತಿಯಿಂದ ತನ್ನ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಇಂದು ರಾತ್ರಿ ಉಡುಪಿಗೆ ಆಗಮಿಸಿದ ರಾಮ್‌ದೇವ್, ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.

ಅಯೋಧ್ಯೆ ರಾಮತೀರ್ಥವಾಗಲಿ, ವಿದ್ಯಾಪರಂಪರೆಯ ಪ್ರತೀಕವಾಗಲಿ ಎಂದು ಹಾರೈಸಿದ ಅವರು, ಇದು ಉಡುಪಿಯ ಪೇಜಾವರಶ್ರೀಗಳಂತಾ ಹಿರಿಯರ ಕನಸು. ದೇಶದ ಅನೇಕ ಮಹಾಪುರುಷರ ಆಂದೋಲನದ ಫಲ. ಈ ಎಲ್ಲಾ ಮಹಾನುಭಾವರ ಒಳಗೊಳ್ಳುವಿಕೆಯೊಂದಿಗೆ ಇದರ ಟ್ರಸ್ಟ್ ರಚನೆಯಾಗಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಮ ಜನ್ಮಭೂಮಿ ನ್ಯಾಸ್‌ಗೆ ಸಲಹೆ ನೀಡಿದರು.

ಪ್ರಧಾನಿ ಶಿಲಾನ್ಯಾಸ ಮಾಡಲಿ: ಮುಂದಿನ ರಾಮನವಮಿ ದಿನದಂದು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿ ಎಂದು ಹೇಳಿದ ಅವರು, ಸ್ವತಹ ಪ್ರಧಾನಿ ನರೇಂದ್ರ ಮೋದಿಯವರೇ ಇದರ ಶಿಲಾನ್ಯಾಸ ನೆರವೇರಿಸಲಿ ಎಂದು ಸಲಹೆ ನೀಡಿದರು.

ಸರಕಾರ ನೇರವಾಗಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲದಿದ್ದರೂ, ಪ್ರಧಾನಿ ಅದರ ಶಿಲಾನ್ಯಾಸ ನೆರವೇರಿಸಲು ಅಡ್ಡಿಯಿಲ್ಲ. ಪ್ರಧಾನಿ ಮೋದಿ ಹಿಂದೂ ಪರಂಪರೆಯ ಪ್ರತಿನಿಧಿಯಾಗಿ ಈ ಕೆಲಸ ಮಾಡಲಿ ಎಂದರು.

ಮಸೀದಿಯೂ ಭವ್ಯವಾಗಿರಲಿ: ಅಯೋಧ್ಯೆಯಲ್ಲಿ ಮಂದಿರಕ್ಕೆ ಸೇರಿದ 67 ಎಕರೆ ಭೂಮಿ ಹೊರತು ಪಡಿಸಿ ಮಸೀದಿ ನಿರ್ಮಾಣಗೊಳ್ಳಲಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಮತ್ತೆ ಅಶಾಂತಿಗೆ ಆಸ್ಪದವಾಗಬಹುದು. ಅಯೋಧ್ಯೆಯಲ್ಲಿ ಮಸೀದಿಯೂ ಭವ್ಯವಾಗಿ ನಿರ್ಮಾಣಗೊಳ್ಳಲಿ. ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಮರ ಡಿಎನ್‌ಎ ಒಂದೇ ಆಗಿದೆ ಎಂದವರು ಹೇಳಿದರು.

ಮುಸ್ಲಿಮರಿಗೆ ಐದು ಎಕರೆ ಭೂಮಿಯ ಭಿಕ್ಷೆ ಬೇಡ ಎಂದ ಅಸದುದ್ದೀನ್ ಒವೈಸಿ ಅವರ ಹೇಳಿಕೆಯ ಕುರಿತು ಕೇಳಿದಾಗ, ಒವೈಸಿ ಒಬ್ಬ ತಲೆಕೆಟ್ಟ ಮನೋಸ್ಥಿತಿಯವ. ಆತನ ಮನಸ್ಸಿನಲ್ಲಿ ವಿಷವೇ ತುಂಬಿದೆ. ಇದು ಹಿಂದೂ ಮುಸ್ಲಿಂರಲ್ಲಿ ಸಂಘರ್ಷ ಉಂಟು ಮಾಡುವ ಪ್ರಯತ್ನ ಎಂದವರು ಟೀಕಿಸಿದರು.

ಹಿಂದೆ ಆಗಿ ಹೋದ ಸಂಘರ್ಷಗಳ ಬಗ್ಗೆ ಈಗ ಚಿಂತಿಸಿ ಫಲವಿಲ್ಲ. ಸೌಹಾರ್ದತೆ ಮತ್ತು ಸಮಾನತೆ ನಮ್ಮ ಆದ್ಯತೆಯಾಗಬೇಕು. ಒವೈಸಿ ಎರಡನೇ ಜಿನ್ನಾ ಆಗಲು ಬಯಸಿದ್ದಾರೆ. ಆದರೆ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ರಾಮದೇವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪರ್ಯಾಯ ಪಲಿಮಾರು ಮಠದ ಮ್ಯಾನೇಜರ್ ಪ್ರಹ್ಲಾದ ಆಚಾರ್ಯ, ಕರ್ನಾಟಕ ರಾಜ್ಯ ಪ್ರಭಾರಿ ಭವರಿಲಾಲ್ ಆರ್ಯ, ಬಾಲಾಜಿ ರಾಘವೇಂದ್ರ ಆಚಾರ್ಯ, ಸುಜಾತ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News