ಅಂತಾರಾಷ್ಟ್ರೀಯ ಯೋಗ ಫೆಡರೇಷನ್ ಅಸ್ತಿತ್ವಕ್ಕೆ: ರಾಮದೇವ್

Update: 2019-11-15 16:47 GMT

ಉಡುಪಿ, ನ.15: ಮನುಷ್ಯನ ಆರೋಗ್ಯಪೂರ್ಣ ಬದುಕಿಗೆ ಬುನಾದಿ ಯಾಗುವ ಯೋಗಕ್ಕೆ ಇನ್ನಷ್ಟು ಉತ್ತೇಜನ ನೀಡಲು ಹಾಗೂ ಜನಪ್ರಿಯ ಗೊಳಿಸಲು ಕೇಂದ್ರ ಸರಕಾರ ಅಂತಾರಾಷ್ಟ್ರೀಯ ಯೋಗ ಸ್ಪೋರ್ಟ್ಸ್ ಫೆಡರೇಷನ್‌ನ್ನು ಸ್ಥಾಪಿಸಿದ್ದು, ಇದರ ಮೊದಲ ಅಧ್ಯಕ್ಷರಾಗಿ ತನ್ನನ್ನು ನೇಮಿಸಿದೆ ಎಂದು ಯೋಗಋಷಿ ಹಾಗೂ ಹರಿದ್ವಾರದ ಪತಂಜಲಿಯೋಗ ಪೀಠದ ಬಾಬಾ ರಾಮದೇವ್ ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ಮುಂದಿನ ಐದು ದಿನಗಳ ಕಾಲ ಪರ್ಯಾಯ ಪಲಿಮಾರು ಮಠ ಹಾಗೂ ಪತಂಜಲಿ ಯೋಗ ಪೀಠದ ವತಿಯಿಂದ ತನ್ನ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಇಂದು ರಾತ್ರಿ ಉಡುಪಿಗೆ ಆಗಮಿಸಿದ ರಾಮ್‌ದೇವ್, ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.

ಯೋಗ ಫೆಡರೇಷನ್‌ನ ಅಧ್ಯಕ್ಷನಾಗಿ ತಾನು ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಹಲವು ಯೋಜನೆಗಳನ್ನು ರೂಪಿಸುವುದಾಗಿ ತಿಳಿಸಿದ ಅವರು, ಮೊದಲು ತನ್ನ ಆದ್ಯತೆ ಯೋಗವನ್ನು ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಹಾಗೂ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಅಧಿಕೃತವಾಗಿ ಸೇರ್ಪಡೆಗೊ ಳಿಸಲು ಪ್ರಯತ್ನಿಸುವುದಾಗಿದೆ ಎಂದವರು ಹೇಳಿದರು.

ಯೋಗ ಬಹುಮುಖ ಉಪಯೋಗದ ಕುರಿತು ಜನರಿಗೆ ಇನ್ನಷ್ಟು ತಿಳುವಳಿಕೆ ನೀಡಬೇಕಾಗಿದೆ. ಯೋಗಾಭ್ಯಾಸ ಮಾಡಿದರೆ, ದೈಹಿಕವಾಗಿ ಆತ ಸಮರ್ಥನಾಗಿ ರುತ್ತಾನೆ. ಆತನಿಗೆ ಯಾವುದೇ ವಿಧದ ಔಷಧಿಯಾಗಲೀ, ಶಸ್ತ್ರಚಿಕಿತ್ಸೆಯ ಅಗತ್ಯವೇ ಬೀಳುವುದಿಲ್ಲ. ಯೋಗ ಎಲ್ಲಾ ರೀತಿಯ ರೋಗಗಳಿಗೂ ರಾಮಬಾಣವಿದ್ದಂತೆ.ಇದರಿಂದ ಕ್ಯಾನ್ಸರ್ ಸಹ ಗುಣವಾಗಿದೆ ಎಂದವರು ವಿವರಿಸಿದರು.

ತಾನು ಇದುವರೆಗೆ 10 ಕೋಟಿ ಮಂದಿಗೆ ಯೋಗವನ್ನು ಕಲಿಸಿದ್ದೇನೆ. ಅದೇ ರೀತಿ ನಮ್ಮ ಕಾರ್ಯಕರ್ತರು 20 ಕೋಟಿಗೂ ಅಧಿಕ ಮಂದಿಗೆ ಯೋಗ ಕಲಿಸಿದ್ದಾರೆ. ‘ಸ್ವಸ್ಥ ಭಾರತ, ಸ್ವಸ್ಥ ವಿಶ್ವ’ ನಮ್ಮ ಗುರಿಯಾಗಿದೆ. ಯೋಗದ ಮೂಲಕ ಇಡೀ ವಿಶ್ವವನ್ನು ರೋಗಮುಕ್ತಗೊಳಿಸಬಹುದು. ಇದರ ಮೂಲಕ ಮನಸ್ಸಿನ ಕಲ್ಮಷ, ದ್ವೇಷ, ಅಸೂಯೆಯನ್ನು ಹೋಗಲಾಡಿಸಬಹುದು. ಇದರಿಂದ ಮನುಷ್ಯ ಮಾನಸಿಕ ಒತ್ತಡದಿಂದ ಮುಕ್ತಿಹೊಂದುತ್ತಾನೆ. ಯೋಗದ ಮೂಲಕ ವಿಶ್ವ ಹಿಂಸೆ ಹಾಗೂ ಯುದ್ಧ ಮುಕ್ತಗೊಳಿಸಬಹುದು ಎಂದರು.

ಮನುಷ್ಯನೊಳಗಿನ ಕಾಮ,ಕ್ರೋಧ, ಅಹಂಕಾರವೂ ಯೋಗದಿಂದ ನಶಿಸುತ್ತದೆ. ಹೀಗಾಗಿ ಮನುಷ್ಯ-ಮನುಷ್ಯರಲ್ಲಿ ವೈರಭಾವವೇ ಇರುವುದಿಲ್ಲ. ಇದರೊಂದಿಗೆ ಯೋಗದ ಮೂಲಕ ತಮ್ಮ ದೇಹತೂಕವನ್ನು ಇಳಿಸಿಕೊಳ್ಳಬಹುದು ಎಂದರು.

ಹತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿ ತಾನು ಐದು ದಿನಗಳ ಯೋಗ ಶಿಬಿರವನ್ನು ಉಡುಪಿಯಲ್ಲಿ ಆಯೋಜಿಸುತ್ತಿರು ವುದಾಗಿ ಅವರು ಹೇಳಿದರು. ಪ್ರತಿದಿನ ಮಕ್ಕಳು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಯೋಗ ಶಿಬಿರ ನಡೆಸುವುದಾಗಿ ಹೇಳಿದ ಅವರು, ಮೊದಲ ಯೋಗ ಶಿಬಿರ ಪ್ರತಿದಿನ ಬೆಳಗ್ಗೆ 5ರಿಂದ 7:30ರವರೆಗೆ ಇರುತ್ತದೆ. ಐದು ದಿನಗಳ ಕಾಲ ತಾನು ಉಡುಪಿ ಯಲ್ಲೇ ವಾಸ್ತವ್ಯ ಇರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ 19ರಂದು ಉಡುಪಿಯಲ್ಲಿ ಸಂತ ಸಮ್ಮೇಳನ, ಮಹಿಳಾ ಸಮ್ಮ್ಞೇಳನ ಹಾಗೂ ಇತರ ಕಾರ್ಯಕ್ರಮಗಳೂ ನಡೆಯಲಿವೆ. ಉಡುಪಿ ಹಾಗೂ ಆಸುಪಾಸಿನ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಜನರಲ್ಲಿ ಮನವಿ ಮಾಡಿದರು.

ನಿಗದಿತ ಸಮಯಕ್ಕಿಂತ ಸುಮಾರು ಎರಡು ಗಂಟೆ ತಡವಾಗಿ ಆಗಮಿಸಿದ ರಾಮದೇವ್‌ರಿಗೆ ಕಲ್ಸಂಕ ಬಳಿ ಭವ್ಯ ಸ್ವಾಗತ ದೊಂದಿಗೆ ಮಠಕ್ಕೆ ಕರತರಲಾಯಿತು. ಪತ್ರಿಕಾಗೋಷ್ಠಿಯ ಬಳಿಕ ಅವರು ರಥಬೀದಿಯಲ್ಲಿ ರಥೋತ್ಸವದಲ್ಲಿ ಭಾಗಿಯಾಗಿದ್ದ ಪರ್ಯಾಯ ಪಲಿಮಾರು ಶ್ರೀಗಳನ್ನು ಭೇಟಿಯಾದರಲ್ಲದೇ ಅವರೊಂದಿಗೆ ರಥೋತ್ಸವದಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News