ಮೂಡುಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಹಬ್ಬ

Update: 2019-11-15 17:42 GMT

ಮೂಡುಬಿದಿರೆ : ಕನ್ನಡ ಭಾಷೆ ನಮ್ಮ ಆಧ್ಯತೆಯಾಗಬೇಕು. ನನ್ನ ತಾಯಿ ಮೊದಲು, ನನ್ನ ಭಾಷೆ ಮೊದಲು ಎನ್ನವ ಮನಸ್ಥಿತಿ ನಮ್ಮದಾಗಬೇಕು. ನಮ್ಮ ನೆಲದಲ್ಲಿ ಮೂಲಭೂತ ಸೌಕರ್ಯ ಪಡೆಯುವ ಯಾವುದೇ ವ್ಯಕ್ತಿ, ಸಂಸ್ಥೆಗಳು ಇಲ್ಲಿನ ಕಾಲ, ಜಾಗ, ಭಾಷೆಗೆಯನ್ನು ಗೌರವಿಸಬೇಕು. ಕನ್ನಡ ತಂತ್ರಾಂಶದ ಬಗ್ಗೆ ಯುವಕರಲ್ಲಿ ಅರಿವು, ಬಳಕೆ ಹೆಚ್ಚಾಗಬೇಕು. ಬಹುರಾಷ್ಟ್ರೀಯ ಕಂಪೆನಿಗಳು ಕನ್ನಡ ನಾಡು, ನುಡಿಯ ನಿರ್ಲಕ್ಷ್ಯ ತಾಳುತ್ತೀವೆ. ಇಂತಹ ಕಂಪೆನಿಗಳು ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲಾಗುವುದು.  ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಹೇಳಿದರು.

ಕಲ್ಲಬೆಟ್ಟುವಿನಲ್ಲಿರುವ ಇನ್ನೋವೇಟಿವ್ ಲರ್ನಿಂಗ್ ಫೌಂಡೇಶನ್‍ನ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಪದವಿಪೂರ್ವ ಮತ್ತು ಆಂಗ್ಲಮಾಧ್ಯಮ ಶಾಲೆಯ ಅಶ್ರಯದಲ್ಲಿ ಶುಕ್ರವಾರ ನಡೆದ ಕನ್ನಡ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. 

ವಿದ್ಯೆ ಇಂದಿನ ಬಹುಮುಖ್ಯ ಅಂಗ, ಸಾಧನ. ಗುರುಕುಲ ಪದ್ಧತಿಯ ಆಶಯವನ್ನು ಉಳಿಸಬೇಕು. ನಮ್ಮ ಭಾರತೀಯ ಮೂಲ ಶಿಕ್ಷಣ ಪದ್ಧತಿ ಗುರು ಮತ್ತು ಶಿಷ್ಯರ ಸಂಬಂಧವನ್ನು ಬೆಳೆಸಿರುವಂತದ್ದು. ವಿದ್ಯಾರ್ಜನೆ ವ್ಯಾಪಾರದ ರೂಪು ನೀಡಿರುವುದು ಮೆಕಾಲೆ ಶಿಕ್ಷಣ ಪದ್ಧತಿ. ಮಾಹಿತಿ ಗೊತ್ತಿದರೆ ಅದು ಜ್ಞಾನವಾಗಲ್ಲ. ಮಾಹಿತಿ ಸಮಾಜಕ್ಕೆ ಉಪಯೋಗವಾದಲ್ಲಿ ಜ್ಞಾನವಾಗುತ್ತದೆ. ಬದುಕನ್ನು ಹೃದಯದ ಮಾತಿನ ಜೊತೆಗೆ ಕಟ್ಟಿಕೊಳಬೇಕಾಗಿದೆ. ಬದುಕಿನಲ್ಲಿ ವೃತ್ತಿಯ ಜೊತೆ ಸದಾ ಪ್ರವೃತ್ತಿ ಇರಬೇಕು. ರಸ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳುವುದೇ ಸಾಂಸ್ಕೃತಿಕ ಬದುಕು. ನಮ್ಮ ರಸ ಕ್ಷಣಗಳನ್ನು ಸಂಸ್ಕಾರ ಜೊತೆ ಜೋಡಿಸಿದಲ್ಲಿ ಸುಂದರ ಬದುಕು ನಮ್ಮದಾಗುತ್ತದೆ. ನಾವು ಜೀವನ್ಮುಖಿಗಳಾದಾಗ ಮಾತ್ರ ಸಮಾಜಮುಖಿಯಾಗುತ್ತೇವೆ. ಸಮಾಜವು ಸಾಂಘಿಕ ಕಾರ್ಯವನ್ನು ನಿರೀಕ್ಷೆ ಮಾಡುತ್ತದೆ ಎಂದರು.

ಚಲನಚಿತ್ರ ನಟ ವಿಜಯ ರಾಘವೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ಹಬ್ಬದ ಕವಿತೆಗಳು 1 ಕವನಸಂಕಲನ, ಕಾಲೇಜಿನ ವಿದ್ಯಾರ್ಥಿನಿ ಕೃತಜ್ಞಾ ಬರೆದ `ಕಲ್ಪನಾ ಕಲರವ', ವಿದ್ಯಾರ್ಥಿನಿ ಅಹನಿ ಬರೆದ `ವೆನ್ ದ ಮೂನ್ ಬ್ಲೀಡ್' ಇಂಗ್ಲೀಷ್ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಗುರುಗಳಲ್ಲಿ ಶ್ರದ್ಧೆ ಭಕ್ತಿ ಇದ್ದಾಗ ಮಾತ್ರ ಕಲೆಕೆ ಸಾಧನೆಗೆ ದಾರಿದೀಪವಾಗುತ್ತದೆ ಕಲೆ ಎನ್ನುವುದು ಜೀವನಕ್ಕೆ ಸಾರ್ಥಕತೆಯ ಭಾವ ಮೂಡಿಸುತ್ತದೆ. ಇವತ್ತು ನಾಡಿಗೆ ಚಿನ್ನರಿಮುತ್ತನಾಗಿ ನಿಮ್ಮ ಮನಸಿನಲ್ಲಿ ನೆಲೆಯೂರಿದ್ದೇನೆ. ಅದಕ್ಕೆ ಕಲೆಯೇ ಕಾರಣ ಎಂದರು. `ರೆಕ್ಕೆ ಇದ್ದರೆ ಸಾಕೇ' ಎಂಬ ಹಾಡನ್ನು ಹಾಡಿ ಸಭಿಕರನ್ನು ರಂಜಿಸಿದರು. ವಿದ್ಯಾರ್ಥಿ ಲೇಖಕಿಯರಿಗೆ ಸನ್ಮಾನಿಸಲಾಯಿತು. 

ಯುನಿವರ್ಸಲ್ ಕೋಚಿಂಗ್ ಅಕಾಡೆಮಿಯ ಅಧ್ಯಕ್ಷ ಉಪೇಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮೌಲ್ಯಮಾಪನ ಅಂಕಗಳನ್ನು ಹೆಚ್ಚಿಸುತ್ತದೆಯೇ ಹೊರತು ಸಾಮಾಜಿಕ ಮೌಲ್ಯಗಳನಲ್ಲ. ಜೀವನ ಕಲೆಯನ್ನು ರೂಪಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು ಎಂದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. 

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರದೀಪ್‍ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮ ಸಂಚಾಲಕ ಡಾ.ನವೀನ್ ಮರಿಕೆ ಕೃತಿ ಪರಿಚಯ ನೀಡಿದರು. ಶಿವಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯ ಶಿಕ್ಷಕ ಗುರುಪ್ರಸಾದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News