ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕನಕದಾಸ ಜಯಂತಿ

Update: 2019-11-15 17:46 GMT

ಬಂಟ್ವಾಳ, ನ. 15: ಒಬ್ಬ ಮನುಷ್ಯನಿಗೆ ಜಾತಿ ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. ಸರಕಾರಿ ಕಚೇರಿಯಲ್ಲಿ ದುಡಿಯುತ್ತಿರುವ ನಾವುಗಳು ಕನಕದಾಸರ ಆದರ್ಶದಂತೆ ಅವರ ಜಾತಿಯನ್ನು ನೋಡದೆ ಸೇವೆಗಳನ್ನು ಕೊಡಬೇಕಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ಅಭಿಪ್ರಾಯಪಟ್ಟಿದ್ದಾರೆ. 

ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಕನಕದಾಸ ಜಯಂತಿ ಆಚರಣೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಲಿಷ್ಟ ಸಾಹಿತ್ಯಗಳು ಇದ್ದ ಕಾಲಘಟ್ಟದಲ್ಲಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯ ಸಾಹಿತ್ಯವನ್ನು ಕನಸದಾಸರು ರಚಿಸಿದ್ದು, ಅವರ ಸಾಹಿತ್ಯವನ್ನು ಅರ್ಥ ಮಾಡಿಕೊಂಡರೆ ಜಾತಿಯ ಹೆಸರಿನ ಹೊಡೆದಾಟಗಳು ದೂರವಾಗಲಿದೆ ಎಂದರು.

ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ದೇವರ ಮೇಲೆ ನಂಬಿಕೆಯಿಟ್ಟು ಮುಂದುವರಿದರೆ ಯಾವ ಸ್ಥಾನಕ್ಕೆ ತಲುಪಲು ಸಾಧ್ಯ ಎಂಬುದಕ್ಕೆ ಕನಕದಾಸರು ಪ್ರೇರಣೆ ಯಾಗುತ್ತದೆ. ಶ್ರದ್ಧೆ, ನಂಬಿಕೆಯಿದ್ದಾಗ ಮಾತ್ರ ನಾವು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.

ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೆಕಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ, ಪಾಣೆಮಂಗಳೂರು ಹೋಬಳಿಯ ಉಪತಹಶೀಲ್ದಾರ್ ರೂಪೇಶ್‍ಕುಮಾರ್, ಆಹಾರ ಶಿರಸ್ತೇದಾರ್ ಶ್ರೀನಿವಾಸ್, ಶಿರಸ್ತೇದಾರ್ ರಾಜೇಶ್ ನಾಯ್ಕ್, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ತಾಲೂಕು ಕಚೇರಿ ಸಿಬಂದಿ, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ ಸ್ವಾಗತಿಸಿದರು. ತಾಲೂಕು ಕಚೇರಿ ವಿಷಯ ನಿರ್ವಾಹಕ ಮಲ್ಲೇಶ್ ವಂದಿಸಿದರು. ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News