ಆಯುಷ್ಮಾನ್ ಭವ: ಅನಾಮಿಕನೋರ್ವ ಆಪ್ತ ಸಹಾಯಕನಾದ ಕತೆ!

Update: 2019-11-16 18:25 GMT

ದ್ವಾರಕೀಶ್ ಅವರ ನಿರ್ಮಾಣ ಮತ್ತು ಪಿ. ವಾಸು ಅವರ ನಿರ್ದೇಶನ ಎಂದೊಡನೆ ನೆನಪಾಗುವ ಚಿತ್ರ ಆಪ್ತಮಿತ್ರ. ಅಂಥದೊಂದು ಯಶಸ್ವಿ ಚಿತ್ರವನ್ನು ನೀಡಿರುವ ಕಾರಣಕ್ಕೆ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿತ್ತು. ಆದರೆ ವಿಪರ್ಯಾಸ ಎನ್ನುವಂತೆ ದೆವ್ವದ ಕತೆ ಇಲ್ಲ ಎನ್ನುವುದನ್ನು ಹೊರತುಪಡಿಸಿದರೆ ‘ಆಯುಷ್ಮಾನ್ ಭವ’ ಚಿತ್ರದ ಕತೆಯಲ್ಲಿ ಹೆಚ್ಚು ವಿಶೇಷವೇನೂ ಇಲ್ಲ.

ಇದು ಒಂದು ದೊಡ್ಡಮನೆಯ ಅವಿಭಕ್ತ ಕುಟುಂಬವೊಂದರಲ್ಲಿ ನಡೆಯುವ ಕತೆ. ಕುಟುಂಬದ ಮುಖ್ಯಸ್ಥರಾಗಿ ತಾತ ಗೋಪಾಲಕೃಷ್ಣ. ಅವರ ಮೂರು ಮಂದಿ ಮಕ್ಕಳು, ಮೂವರು ಸೊಸೆಯರು ಹೀಗೆ ಮನೆ ತುಂಬ ಮಂದಿ ಇರುತ್ತಾರೆ. ಸಾಲದೆಂಬಂತೆ ತಾತನ ಮೂರು ಜನ ಸಮಕಾಲೀನ ಸ್ನೇಹಿತರು ಕೂಡ ಆ ಮನೆಯ ಖಾಯಂ ಸದಸ್ಯರಂತೆ ಕಾಣಿಸುತ್ತಾರೆ. ಮೊಮ್ಮಗಳ ಮದುವೆ ಮಾತುಕತೆ ಸಮಾರಂಭದಲ್ಲಿ ಆ ಮನೆ ಸೇರಿಕೊಳ್ಳುವ ಕೃಷ್ಣ ಎನ್ನುವ ಯುವಕ ತಾತನ ಆಪ್ತ ಸಹಾಯಕನಾಗುತ್ತಾನೆ. ಆದರೆ ಆತನ ಕೆಲಸ ತಾತನಿಗಷ್ಟೇ ಸೀಮಿತವಾಗುವುದಿಲ್ಲ. ಅವರ ಔಟ್‌ಹೌಸ್‌ನಲ್ಲಿರುವ ತಾತನ ಮತ್ತೋರ್ವ ಮೊಮ್ಮಗಳು ಮಾನಸಿಕ ಅಸ್ವಸ್ಥತೆ ಹೊಂದಿರುವ ಲಕ್ಷ್ಮಿಯ ತನಕ ಹಬ್ಬುತ್ತದೆ. ಆಕೆಯನ್ನು ಆತ್ಮೀಯಳನ್ನಾಗಿಸಿಕೊಳ್ಳುವ ಕೃಷ್ಣ ಒಂದು ದಿನ ಲಕ್ಷ್ಮಿಯೊಂದಿಗೆ ಪರಾರಿಯಾಗುತ್ತಾನೆ. ಆತನಿಗೂ ಲಕ್ಷ್ಮಿಗೂ ಏನು ಸಂಬಂಧ? ಲಕ್ಷ್ಮಿಯೊಂದಿಗೆ ಆತ ಎಲ್ಲಿಗೆ ಹೋಗುತ್ತಾನೆ? ನಿಜಕ್ಕೂ ಕೃಷ್ಣ ಯಾರು ಎನ್ನುವುದನ್ನು ಕ್ಲೈಮ್ಯಾಕ್ಸ್‌ನಲ್ಲಿ ತೆರೆದಿಡಲಾಗಿದೆ. ಅಲ್ಲಿಯ ತನಕ ಚಿತ್ರ ಒಂದು ಮ್ಯೂಸಿಕಲ್ ಜರ್ನಿಯಾಗಿ ಸಾಗುತ್ತದೆ.

 ಚಿತ್ರದಲ್ಲಿ ತಾತ ಗೋಪಾಲಕೃಷ್ಣನಾಗಿ ಅನಂತನಾಗ್ ನಟಿಸಿದ್ದಾರೆ. ಅವರ ಸಹಾಯಕ ಕೃಷ್ಣನಾಗಿ ಬರುವ ಶಿವರಾಜ್ ಕುಮಾರ್ ಸಹಯೋಗದಲ್ಲಿ ಅದ್ಭುತ ಸನ್ನಿವೇಶಗಳಿಗೆ ಜೋಡಿನಟರು ಸಾಕ್ಷಿಯಾಗಿದ್ದಾರೆ. ಆರಂಭದಲ್ಲಿ ಲವಲವಿಕೆಯ ಯುವಕನಾಗಿ, ಬಳಿಕ ಆಪ್ತ ಸಹಾಯಕನಾಗಿ, ಆ್ಯಕ್ಷನ್ ದೃಶ್ಯಗಳಲ್ಲಿ ಹೊಡೆದಾಡುವ ನಾಯಕನಾಗಿ ಶಿವಣ್ಣನ ನಟನೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಮಾನಸಿಕ ಅಸ್ವಸ್ಥತೆಯ ಪಾತ್ರದಲ್ಲಿ ರಚಿತಾ ಅವರ ನಟನೆ ಮನಸು ತಟ್ಟುವಲ್ಲಿ ವಿಫಲವಾಗಿದೆ. ಲಕ್ಷ್ಮಿ ಪಾತ್ರವನ್ನು ಆವಾಹಿಸಿಕೊಳ್ಳುವ ಅವರ ಪ್ರಯತ್ನಕ್ಕೆ ಅವರ ಕಣ್ಣುಗಳೇ ಸಹಕಾರಿಯಾಗಿಲ್ಲ ಎನ್ನಬಹುದು! ತಾತನ ಸ್ನೇಹಿತರಾಗಿ ರಮೇಶ್ ಭಟ್, ಅನಂತವೇಲು ಮತ್ತು ಬಾಬು ಹಿರಣ್ಣಯ್ಯ ನಟಿಸಿದ್ದರೆ ಮಕ್ಕಳಾಗಿ ಸುಂದರ್, ನಟರಂಗ ರಾಜೇಶ್ ಮತ್ತು ನೀನಾಸಂ ಅಶ್ವಥ್ ನಟಿಸಿದ್ದಾರೆ. ಸೊಸೆಯರ ಪೈಕಿ ವೀಣಾ ಅವರು ಸುಂದರ್ ಗೆ ಪರದೆಯ ಮೇಲೆಯೂ ಜೋಡಿಯಾಗಿದ್ದಾರೆ. ಸುಹಾಸಿನಿ ಸಂಗೀತದ ಶಿಕ್ಷಕಿಯಾಗಿದ್ದಾರೆ.

ಸಾಧು ಕೋಕಿಲ ಮತ್ತು ಆರೋಹಿಯವರ ಜೋಡಿ ಹಾಸ್ಯದ ಅಡುಗೆಗೆ ಪ್ರಯತ್ನಿಸಿದೆ. ರಂಗಾಯಣ ರಘು ಅವರ ಜ್ಯೋತಿಷಿ ಪಾತ್ರ ನಗಿಸುವಲ್ಲಿ ಯಶಸ್ವಿಯಾಗಿದೆ. ಜೈಜಗದೀಶ್ ಅವರು ಕೂಡ ಒಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಖಳನಾಗಿ ಯಶ್‌ಶೆಟ್ಟಿಯವರು ಗಮನಾರ್ಹ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಕನ್ನಡದ ಭರವಸೆಯ ನಟನಾಗಿ ಗುರುತಿಸಲ್ಪಟ್ಟಿರುವುದು ನಿಜ. ಕೌಟುಂಬಿಕ ಎನಿಸುವ ಕತೆ, ಸಂಗೀತಮಯ ಸನ್ನಿವೇಶಗಳು ಚಿತ್ರವನ್ನು ಆತ್ಮೀಯವಾಗಿಸುವಲ್ಲಿ ಯಶಸ್ವಿಯಾಗಿದೆ. ಗುರುಕಿರಣ್ ಅವರ ಸಂಗೀತ ಚಿತ್ರದ ಹೈಲೈಟ್.

ಒಂದೆರಡು ಕಡೆ ಶಿವರಾಜ್ ಕುಮಾರ್ ಅವರ ಅಂಡರ್ ಪ್ಲೇ ಪಂಚ್‌ಗಳು ಕೂಡ ಗಮನ ಸೆಳೆಯುತ್ತವೆ. ಆದರೆ ನಾಯಕಿಯೊಂದಿಗೆ ಪರಾರಿಯಾಗುವ ದೃಶ್ಯಗಳಲ್ಲಿ ಗ್ರಾಫಿಕ್ ಹುಲಿಯನ್ನು ಕೊಲ್ಲುವ ಸನ್ನಿವೇಶ ಅನಗತ್ಯ ಎನಿಸಿದರೆ, ಬೋಟ್‌ನಲ್ಲಿ ನಿಧಿ ಸುಬ್ಬಯ್ಯ ಡ್ಯಾನ್ಸ್ ಹಳೆಯ ಡಿಟೆಕ್ಟಿವ್ ಚಿತ್ರಗಳ ಶೈಲಿಯನ್ನು ನೆನಪಿಸುವಂತಿದೆ. ಶಿವಾಜಿ ಪ್ರಭು ನಿರ್ವಹಿಸಿರುವ ತಂದೆಯ ಪಾತ್ರ, ಅವರ ದೇಹದಂತೆ ಒಂದೆಡೆ ಮನಸ್ಸಿನಿಂದಲೂ ಉರುಳಿಕೊಂಡು ಹೋಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಶಿವಣ್ಣನಿಗೆ ನೀಡಲಾದ ಬಿಲ್ಡಪ್ ಮತ್ತೆ ಚರ್ವಿತ ಚರ್ವಣ ಎನಿಸಿದರೂ ಜೋಡಿ ಒಂದಾಗುವುದನ್ನು ತೋರಿಸಿರುವ ರೀತಿಯಲ್ಲಿ ಹೊಸತನ ಇದೆ. ಒಟ್ಟಿನಲ್ಲಿ ಇದು ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಕೌಟುಂಬಿಕವಾಗಿ ನೋಡಿ ಮೆಚ್ಚಬಹುದಾದ ಚಿತ್ರ.

ತಾರಾಗಣ: ಡಾ.ಶಿವರಾಜ್ ಕುಮಾರ್, ರಚಿತಾ ರಾಮ್
ನಿರ್ದೇಶನ: ಪಿ ವಾಸು
ನಿರ್ಮಾಣ: ದ್ವಾರಕೀಶ್ ಚಿತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News