ಚಿದಂಬರಂಗೆ ಜಾಮೀನು ತಿರಸ್ಕರಿಸಿದ ಹೈಕೋರ್ಟ್ ಆದೇಶದಲ್ಲಿ ಸಂಬಂಧವಿಲ್ಲದ ಸೆಕ್ಷನ್‍ ಗಳು

Update: 2019-11-17 08:02 GMT

ಹೊಸದಿಲ್ಲಿ, ನ.17: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿ ದೆಹಲಿ ಹೈಕೋರ್ಟ್ ನೀಡಿರುವ ಆದೇಶದಲ್ಲಿ ಈ ಪ್ರಕರಣಕ್ಕೆ ಸಂಬಂಧಪಪಡದ  ಹಣ ದುರ್ಬಳಕೆ ಪ್ರಕರಣದ ಸೆಕ್ಷನ್‍ ಗಳು ನುಸುಳಿರುವುದು ಪತ್ತೆಯಾಗಿದೆ ಎಂದು www.thehindu.com ವರದಿ ಮಾಡಿದೆ. ಚಿದಂಬರಂ ವಿರುದ್ಧ ಕಾನೂನು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಕೆ.ಕೈತ್ ಅವರು ಸುಪ್ರೀಂಕೋರ್ಟ್ 2017ರ ನವೆಂಬರ್ 10ರಂದು ರೋಹಿತ್ ಟಂಡನ್ ಪ್ರಕರಣದಲ್ಲಿ ನೀಡಿದ ತೀರ್ಪಿನ ಪ್ಯಾರಾಗಳನ್ನು ಚಿದಂಬರಂ ಪ್ರಕರಣದ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ದೆಹಲಿಯ ವಕೀಲ ರೋಹಿತ್ ಟಂಡನ್ ಅವರ ವಿರುದ್ಧದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ಯಾರಾಗಳು ನ್ಯಾಯಮೂರ್ತಿ ಕೈತ್ ನೀಡಿದ ಈ ತೀರ್ಪಿನಲ್ಲಿದೆ ಎಂದು ವರದಿ ತಿಳಿಸಿದೆ.

ಈ ಪೈಕಿ ಒಂದು ಪ್ಯಾರಾದಲ್ಲಿ, "2016ರ ನವೆಂಬರ್ 15ರಿಂದ 19ರ ಅವಧಿಯಲ್ಲಿ 31.75 ಕೋಟಿ ರೂಪಾಯಿಗಳನ್ನು ಕೊಟಾಕ್ ಮಹೀಂದ್ರಾ ಬ್ಯಾಂಕಿನ ಎಂಟು ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ. ಈ ಅವಧಿಯಲ್ಲಿ ಸುನೀಲ್ ಕುಮಾರ್, ದಿನೇಶ್ ಕುಮಾರ್, ಅಭಿಲಾಶಾ ದುಬೆ, ಮದನ್ ಕುಮಾರ್, ಮದನ್ ಸೈನಿ, ಸತ್ಯನಾರಾಯಣ ದಾಗ್ಡಿ ಮತ್ತು ಸೀಮಾಬಾಯಿ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಪಡೆಯಲಾಗಿದೆ. ಆ ಬಳಿಕ ನೀಡಿದ ಬಹುತೇಕ ಎಲ್ಲ ಡಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಹೇಳಲಾಗಿದೆ. ಆ ಎಲ್ಲ ಎಂಟು ಹೆಸರುಗಳು ಕಾಲ್ಪನಿಕ ಎಂದು ಹೇಳಲಾಗುತ್ತಿದೆ.

ಚಿದಂಬರಂ ಅವರು ಈ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುವ ನಿರೀಕ್ಷೆ ಇದೆ. ಟಂಡನ್ ವಿರುದ್ಧದ ಪ್ರಕರಣಗಳು 2016ರ ಅವಧಿಗೆ ಸಂಬಂಧಿಸಿದ್ದು, ಐಎನ್‍ಎಕ್ಸ್ ಮೀಡಿಯಾ ಪ್ರಕರಣ 2007-08ರ ಅವಧಿಯದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News