ನೇಜಾರು: ಸಾವಿನ ಮನೆಯ ಮುಂದೆ ಮೈಕ್ ಬಂದ್ ಮಾಡಿ ಸಂತಾಪ ಸೂಚಿಸಿದ ಮಿಲಾದುನ್ನಬಿ ರ‍್ಯಾಲಿ!

Update: 2019-11-17 11:52 GMT

ಉಡುಪಿ, ನ.17: ಕಲ್ಯಾಣಪುರ ಸಂತೆಕಟ್ಟೆಯಲ್ಲಿ ನಡೆದ ನೇಜಾರು ಜುಮಾ ಮಸೀದಿಯ ಮೀಲಾದುನ್ನಬಿ ರ‍್ಯಾಲಿ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಯಿತು. ಮಹಿಳೆಯೊಬ್ಬರ ಸಾವಿನ ಸುದ್ದಿ ತಿಳಿದು ಆ ಮನೆಯ ಮುಂದೆ ರ‍್ಯಾಲಿಯ ಮೈಕ್ ಬಂದ್ ಮಾಡಿ ಹಾಗೂ ಮನೆಗೆ ತೆರಳಿ ಸಂತಾಪ ವ್ಯಕ್ತಪಡಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಮೀಲಾದುನ್ನಬಿ ಪ್ರಯುಕ್ತ ನೇಜಾರು ಜುಮಾ ಮಸೀದಿ ವತಿಯಿಂದ ಮೀಲಾದ್ ರ‍್ಯಾಲಿಯನ್ನು ಹಮ್ಮಿ ಕೊಳ್ಳಲಾಗಿತ್ತು. ಮಸೀದಿಯ ಅಧ್ಯಕ್ಷ ಅಬೂಬಕರ್ ನೇಜಾರು ಅವರು ಖತೀಬ್ ಉಸ್ಮಾನ್ ಮದನಿಯವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.

ಬಳಿಕ ಮೆರವಣಿಗೆಯು ನೇಜಾರಿನಿಂದ ಸಂತೆಕಟ್ಟೆಗೆ ಮಾರ್ಗವಾಗಿ ಕಲ್ಯಾಣಪುರಕ್ಕೆ ತೆರಳಿತು. ರ್ಯಾಲಿಯಲ್ಲಿ ಧಪ್, ಸ್ಕೌಡ್ ಹಾಗೂ ಎಸ್‌ಬಿಎಸ್ ರ್ಯಾಂಬೊ ತಂಡ ಗಮನ ಸೆಳೆಯಿತು. ರ‍್ಯಾಲಿಯು ಕಲ್ಯಾಣಪುರದಿಂದ ವಾಪಸ್ ನೇಜಾರು ಮಸೀದಿಗೆ ಹಿಂದಿರುಗಿ ಬರುವ ದಾರಿಯಲ್ಲಿ ಸ್ಥಳೀಯ ಮಹಿಳೆ ಜಯಂತಿ ಎಂಬವರು ಅನಾರೋಗ್ಯದಿಂದ ಮೃತ ಪಟ್ಟ ಸುದ್ದಿ ತಿಳಿಯಿತು.

ಕೂಡಲೇ ಮೃತರ ಮನೆಯ ಮುಂದೆ ಸಾಗುತ್ತಿದ್ದ ರ್ಯಾಲಿಯ ಮೈಕ್‌ನ್ನು ಬಂದ್ ಮಾಡಿ ಮೃತರಿಗೆ ಗೌರವ ಸೂಚಿಸಲಾಯಿತು. ಇದೇ ವೇಳೆ ಮಸೀದಿಯ ಅಧ್ಯಕ್ಷ ಹಾಗೂ ಜಿಲ್ಲಾ ಸಂಯುಕ್ತ ಜಅಮಾತ್ ಅಧ್ಯಕ್ಷ ಅಬೂಬಕರ್ ನೇಜಾರು, ಮಾಜಿ ತಾಪಂ ಸದಸ್ಯ ರಹ್ಮತುಲ್ಲಾ ಹೂಡೆ, ಮಸೀದಿಯ ಖತೀಬ್ ಉಸ್ಮಾನ್ ಮದನಿ, ನೌಫಲ್ ಮದನಿ ನೇಜಾರು ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News