ಅನಾಥಾಶ್ರಮದ ಮಕ್ಕಳ ಕ್ರೀಡೆ-ಸಾಂಸ್ಕೃತಿಕ ಸ್ಪರ್ಧಾ ಕೂಟ

Update: 2019-11-17 12:34 GMT

ಮಂಗಳೂರು, ನ.17: ನಗರದ ಸುತ್ತಮುತ್ತಲಿನ 10 ಅನಾಥಾಶ್ರಮಗಳ ಸುಮಾರು 600ಕ್ಕೂ ಅಧಿಕ ಮಕ್ಕಳಿಗೆ ರವಿವಾರ ಸಂಭ್ರಮದ ದಿನ.

ತಮಗೆ ಒದಗಿದ ಸುವರ್ಣ ಅವಕಾಶವನ್ನು ಸಂತಸ-ಸಂಭ್ರಮ ಉತ್ಸಾಹದ ಕಡಲಾಗಿ ಈ ಮಕ್ಕಳು ಪರಿವರ್ತಿಸಿಬಿಟ್ಟರು. ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದ ವಿವಿಧ ಆಶ್ರಮಗಳ ಈ ಮುಗ್ಧ ಮಕ್ಕಳು ಮುಕ್ತವಾಗಿ ಪರಸ್ಪರ ಬೆರೆತು, ತಮ್ಮೆಲ್ಲಾ ನೋವುಗಳನ್ನು ಮರೆತು ಹೊಸ ಹುಮ್ಮಸ್ಸಿನಿಂದ ನಕ್ಕು ಕುಣಿದಾಡಿದರು.

ಅಪರಿಚಿತರಾದರೂ ಪರಿಚಿತರಾದಂತೆ ಮಾತನಾಡಿದರು. ಸ್ನೇಹ ಸಂಪಾದಿಸಿ ಸಂಭ್ರಮದಲ್ಲಿ ತೇಲಿ ಹೋದರು. ಎಲ್ಲಾ ಮಕ್ಕಳು ವರ್ಣರಂಜಿತ ಪಥ ಸಂಚಲನ ನೀಡಿದ ಬಳಿಕ ಸ್ಫೂರ್ತಿ ಮತ್ತು ಉತ್ಸಾಹದಿಂದ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಮತ್ತು ಕಲಾಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು. ಪ್ರತಿಯೊಬ್ಬರ ಮುಖದ ಮೇಲೆ ಮಂದಹಾಸ ಬಿರುತಿತ್ತು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇದರ ಜಂಟಿ ಆಶ್ರಯದಲ್ಲಿ ರವಿವಾರ ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ರೋಟರಿ 21ನೇ ವಾರ್ಷಿಕ ಅಂತರ್ ಅನಾಥಾಶ್ರಮ ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಕಂಡು ಬಂದ ದೃಶ್ಯ ಇದಾಗಿತ್ತು.

ಶಾಸಕ ವೇದವ್ಯಾಸ ಕಾಮತ್ ಸ್ಪರ್ಧಾಕೂಟವನ್ನು ಉದ್ಘಾಟಿಸಿ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಶ್ಲಾಘನೀಯ ಎಂದರು.

ಕಾರ್ಪೊರೇಟರ್ ಸಂಧ್ಯಾ ಆಚಾರ್ಯ, ಸಂಸ್ಥೆಯ ಗೀತಾನಂದ ಪೈ, ಪ್ರೇಮನಾಥ್ ಕುಡ್ವ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ರೋಟರಿ ಜಿಲ್ಲಾ ಗವರ್ನರ್ ಎಸ್.ಗುರುರಾಜ್ ವಿಜೇತರಿಗೆ ಬಹುಮಾನ ವಿತರಿಸಿದರು.

ಡಾ. ದೇವದಾಸ್ ರೈ ಶುಭ ಹಾರೈಸಿದರು. ಡಾ. ಜಯಪ್ರಕಾಶ್ ಪೂಂಜಾ ಸ್ವಾಗತಿಸಿದರು. ಶೆಲ್ದಾನ ಕ್ರಾಸ್ತ ವಂದಿಸಿದರು. ಕೆ.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News