ಜೀವನದಲ್ಲಿ ಹಿನ್ನಡೆ ತಾತ್ಕಾಲಿಕ; ಎದೆಗುಂದಬೇಡಿ: ಮಹೇಶ್ ಎಸ್.

Update: 2019-11-17 15:47 GMT

ಮಣಿಪಾಲ, ನ.17: ಜೀವನದಲ್ಲಿ ಹಿನ್ನಡೆ ಎಂಬುದು ತಾತ್ಕಾಲಿಕ. ಇದರಿಂದ ಎಂದಿಗೂ ಎದೆಗುಂದಬೇಡಿ, ಪ್ರಯತ್ನವನ್ನು ನಿಲ್ಲಿಸಬೇಡಿ. ಹಿನ್ನಡೆಯೊಂದಿಗೆ ಯಶಸ್ಸಿನ ಬೀಜವೂ ಜೊತೆಯಲ್ಲೇ ಇರುತ್ತದೆ ಎಂದು ಯುಎಇಯ ಟಿಎಎಸ್‌ಸಿ ಔಟ್‌ಸೋರ್ಸಿಂಗ್‌ನ ಸ್ಥಾಪಕ ಹಾಗೂ ಸಿಇಓ ಮಹೇಶ್ ಶಹದಾದಪುರಿ ಪದವೀಧರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ರವಿವಾರನಡೆದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ (ಮಾಹೆ)ನ 27ನೇ ಘಟಿಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡುತಿದ್ದರು. ಘಟಿಕೋತ್ಸವದ ಕೊನೆಯ ದಿನದಂದು ಒಟ್ಟು 1387 ಮಂದಿ ವಿದ್ಯಾರ್ಥಿಗಳು ವಿವಿಧ ಪದವಿ, ಡಾಕ್ಟರೇಟ್ ಪದವಿ ಹಾಗೂ ಚಿನ್ನದ ಪದಕಗಳನ್ನು ಪಡೆದರು.

ಉದ್ಯಮಿಯಾಗಿ ತನ್ನ ಬದುಕಿನ ಏಳು-ಬೀಳುಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಮಾಹೆಯ ಹಳೆ ವಿದ್ಯಾರ್ಥಿಯಾಗಿರುವ ಮಹೇಶ್, ಮಣಿಪಾಲದ ಎಂಐಟಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದು ಹೊರಬಂದ ಬಳಿಕ ಉದ್ಯೋಗವೊಂದನ್ನು ಪಡೆಯಲು ತಾನು ನಡೆಸಿದ ಹೋರಾಟವನ್ನು ಸವಿಸ್ತಾರವಾಗಿ ವಿವರಿಸಿದರು.

ತನಗೆ ಭಾರತದಲ್ಲಾಗಲಿ, ಮುಂದೆ ಕೆಲಸ ಹುಡುಕಿ ತೆರಳಿದ ದುಬೈಯಲ್ಲಾಗಲೀ ಯಾರೂ ಸಂದರ್ಶನಕ್ಕೆ ಕರೆಯಲಿಲ್ಲ. ಉತ್ತಮ ವಿದ್ಯಾರ್ಥಿಯಾಗಿದ್ದ ತಾನು ಉದ್ಯೋಗಕ್ಕಾಗಿ ಸುದೀರ್ಘಕಾಲ ಆತಂಕದಿಂದ ಕಾಯಬೇಕಾಯಿತು ಎಂದರು.

ಬಹಳಷ್ಟು ಕಂಪೆನಿಗಳು ತನ್ನ ಅರ್ಜಿಯನ್ನು ತಿರಸ್ಕರಿಸಿದಾಗ ನನ್ನ ನಿಲುವು ಗಟ್ಟಿಯಾಯಿತು. ದುಬೈಯಲ್ಲಿ ಒಂದೆರಡು ಉದ್ಯೋಗ ಸಿಕ್ಕಿತಾದರೂ, ಮೂರು ತಿಂಗಳಿಗೇ ಅವುಗಳಿಂದ ಹೊರಬಂದೆ. ಕೊನೆಗೆ ಬೋಸ್ಟನ್‌ನಲ್ಲಿ ಎಂಬಿಎ ಮುಗಿಸಿ ಮತ್ತೆ ಉದ್ಯೋಗದ ಬೇಟೆಗಿಳಿದೆ ಎಂದವರು ತನ್ನ ಹೋರಾಟದ ಬದುಕನ್ನು ಮೆಲುಕು ಹಾಕಿದರು.

ಸುಮಾರು 12 ಸಂದರ್ಶನ ಗಳನ್ನು ಮುಗಿಸಿದ ಬಳಿಕ ನನಗೆ ಜಾಕ್‌ಪಾಟ್ ಹೊಡೆಯಿತು. ಇಂಟೆಲ್‌ನಲ್ಲಿ ನಾನು ಉದ್ಯೋಗ ಪಡೆದೆ. ಆದರೆ ಅಷ್ಟರಲ್ಲಿ ಸ್ವಉದ್ಯೋಗದ ನಿಲುವು ಗಟ್ಟಿಗೊಂಡು 1999ರಲ್ಲಿ ನನ್ನದೇ ಆದ ಕಂಪೆನಿ ಆರಂಭಿಸಿದೆ. ನನ್ನಲ್ಲಿದ್ದ, ನನ್ನ ಕುಟುಂಬದವರಿಂದ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ಕಂಪೆನಿ ಆರಂಭಿಸಿದೆ. ದುರಾದೃಷ್ಟ ಅಲ್ಲೂ ನನ್ನ ಬೆನ್ನು ಬಿಡದೇ ನನ್ನದೆಲ್ಲವನ್ನೂ ಕಳೆದುಕೊಂಡು ಮತ್ತೆ ಹಿಂದಿನ ಸ್ಥಿತಿಗೆ ಬಂದೆ.

ಹಲವು ತಿಂಗಳ ಬಳಿಕ ನಾನು ಮತ್ತೊಂದು ಕಂಪೆನಿಯನ್ನು ಪ್ರಾರಂಭಿಸಿದೆ. ಈ ಬಾರಿ ಹೆಚ್ಚು ಎಚ್ಚರಿಕೆಯಿಂದ ಹಾಗೂ ಆಕ್ರಮಣಕಾರಿಯಾಗಿ ವಿಭಿನ್ನವಾಗಿ ಪ್ರಾರಂಭಿಸಿದೆ. ಯಶಸ್ಸು ನನ್ನ ಕೈಹಿಡಿಯಿತು. ಇಂದು ನನ್ನ ಕಂಪೆನಿ ವಿಶ್ವದ 20 ದೇಶಗಳಲ್ಲಿ 77 ದೇಶಗಳ ಪೌರತ್ವ ಹೊಂದಿದ 5000 ಮಂದಿ ಉದ್ಯೋಗಿ ಗಳಿದ್ದಾರೆ. ವಿಶ್ವದಲ್ಲಿ 80 ಮಿಲಿಯ ಗ್ರಾಹಕರೂ ನಮಗಿದ್ದು, ವಿಶ್ವದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದೆ ಎಂದು ಹೆಮ್ಮೆಯಿಂದ ನುಡಿದರು.

ಕೆಲವೊಮ್ಮೆ ನೀವು ಒಮ್ಮಿಂದೊಮ್ಮೆಗೆ ಯಶಸ್ಸನ್ನು ಪಡೆಯದಿರಬಹುದು. ವೈಫಲ್ಯತೆ ಹಾಗೂ ಕಲಿಯುವಿಕೆಗೂ ಗೌರವ ಕೊಡಿ. ಕಲಿಯುವಿಕೆಯನ್ನು ನಿಲ್ಲಿಸಬೇಡಿ. ಪ್ರಕೃತಿಯೂ ಸೇರಿದಂತೆ ಪ್ರತಿಯೊಬ್ಬರಿಂದ, ಎಲ್ಲಾ ಕಡೆ ಗಳಿಂದಲೂ ಬದುಕಿನಲ್ಲಿ ಕಲಿಯುವುದನ್ನು ನಿಲ್ಲಿಸಬೇಡಿ ಎಂದು ಕಿವಿಮಾತು ಹೇಳಿದರು.

ಕೊನೆಯ ದಿನವಾದ ಇಂದು ಎಂಐಟಿಯ ದಿಗಂತ್, ಮಣಿಪಾಲ ಬಿಡಿಎಸ್‌ನ ಸೋಹಮ್ ಮಿತ್ರ, ಮಣಿಪಾಲದ ಎಂಕಾನ್ಸ್‌ನ ನೈಮಾ ಲ್ಹೇಮೊ ಬಿಎಸ್ಸಿ ನರ್ಸಿಂಗ್‌ನಲ್ಲಿ, ಮಣಿಪಾಲ ಪಿಎಸ್‌ಪಿಎಚ್‌ನ ರೆಹನಾ ಅಬ್ದುಲ್ ಜಬ್ಬಾರ್ ಎಂಪಿಎಚ್‌ನಲ್ಲಿ ಚಿನ್ನದ ಪದಕಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News