ಹೆಜಮಾಡಿ ಬಂದರು: ವಾರದೊಳಗೆ ಸಭೆ, ಜನವರಿಯಲ್ಲಿ ಶಿಲಾನ್ಯಾಸ- ಕೋಟ ಶ್ರೀನಿವಾಸ ಪೂಜಾರಿ

Update: 2019-11-17 16:51 GMT

ಪಡುಬಿದ್ರಿ: ಹೆಜಮಾಡಿಯ ಸರ್ವಋತು ಮೀನುಗಾರಿಕಾ ಬಂದರಿಗೆ ಇರುವ ಭೂಸ್ವಾೀನತಾ ಅಡೆತಡೆಗಳನ್ನು ನಿವಾರಿಸಿಕೊಂಡು ವಾರದೊಳಗಾಗಿ ಬೆಂಗಳೂರಿನಲ್ಲಿ ಸಚಿವ ಹಾಗೂ ಕಾರ್ಯದರ್ಶಿ ಮಟ್ಟದ ಸಭೆ ನಡೆಸಿ ವರದಿ ತಯಾರಿಸಿಕೊಳ್ಳಲಿದ್ದೇವೆ.  ಜನವರಿ ತಿಂಗಳ ಎರಡನೇ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮೀನುಗಾರಿಕಾ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ವ್ಯಕ್ತಪಡಿಸಿದರು. 

ಪ್ರಸ್ತಾವಿತ ಹೆಜಮಾಡಿ ಬಂದರು ನಿರ್ಮಾಣ ಯೋಜನಾ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ರವಿವಾರ ಭೇಟಿ ನೀಡಿ ಮಾತನಾಡಿದರು. 
ಯೋಜನೆಗೆ ಸಂಬಂಧಿಸಿ 12 ಎಕರೆ ಮೀನುಗಾರಿಕೆ ಇಲಾಖೆಯಲ್ಲಿದ್ದು,  ಸರ್ಕಾರದಿಂದ ಈಗಾಗಲೇ 9.41 ಎಕರೆ ಹಸ್ತಾಂತರಿಸಲಾಗಿದೆ. 35 ಎಕರೆ ಮಂಜೂರಾಗಬೇಕಾಗಿರುವ ಸರ್ಕಾರಿ ಜಾಗ ಹಾಗೂ ಬ್ರೇಕ್ ವಾಟರ್‍ಗೆ ಮೀಸಲಿರಿಸಿದ 6 ಎಕರೆ  ಜಮೀನು ಖಾಸಗಿಯವರಲ್ಲಿದೆ. ಸರ್ಕಾರಿ ಹಾಗು ಖಾಸಗಿ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಯೋಜನೆ ಕಾರ್ಯಗತ ವಿಳಂಬದಿಂದ 138.06 ಕೋಟಿ ಇದ್ದ ಯೋಜನಾ ವೆಚ್ಚ ಪ್ರಸ್ತುತ 167 ಕೋಟಿಗೆ ತಲುಪಿದೆ. , ಖಾಸಗಿಯವರ ಭೂಸ್ವಾಧಿನತೆಗೆ ರೂ. 3.19 ಕೋಟಿ ಪಾವತಿ ಸೇರಿ 170 ಅದು ಕೋಟಿಗೆ ತಲುಪಿದಂತಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ಮೊದಲ ಯೊಜನಾ ವೆಚ್ಚದಂತೆ 50ರ ಅನುಪಾತದಲ್ಲಿ ಮೊದಲ ಕಂತಾಗಿ ಈಗಾಗಲೇ 13.86 ಮಂಜೂರು ಮಾಡಿದೆ. ಈಗ ಯೋಜನೆ ವೆಚ್ಚ ಏರಿಕೆಯಾದ ಪರಿಣಾಮ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ.

ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಬಂದರು ನಿರ್ಮಾಣ ಯೋಜನೆ ನಿರ್ಣಾಯಕ ಹಂತಕ್ಕೆ ತಲುಪಿದ್ದೇವೆ. ಹೆಚ್ಚುವರಿಯಾಗಿ ತಗಲುವ ಮೊತ್ತವನ್ನು ಮುಖ್ಯಮಂತ್ರಿಯವರಲ್ಲಿ ಮಾತನಾಡಿ ತರುವ ಪ್ರಯತ್ನವನ್ನು ಮಾಡಲಾಗುವುದು ಎಂದು ತಿಳಿಸಿದರು.

ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಕೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಕೃಷ್ಣ, ಬಂದರು ಇಲಾಖೆ ಕಾರವಾರ ಸುಪರಿಂಡೆಂಟ್ ಇಂಜಿನಿಯರ್ ಟಿ. ರಾಥೋಡ್, ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಮಂಚೇಗೌಡ, ಮೀನುಗಾರಿಕಾ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಗಣೇಶ್, ಕೆಎಫ್‍ಡಿಸಿ ನಿರ್ದೇಶಕ ದೊಡ್ಡಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮೀನುಗಾರಿಕಾ ಇಲಾಖೆ ಸಹಾಯಕ ಇಂಜಿನಿಯರ್ ಪಾಶ್ರ್ವನಾಥ್, ನಾಡೋಜ ಜಿ. ಶಂಕರ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಪುತ್ರನ್, ಹೆಜಮಾಡಿ ಬಂದರು ಸಮಿತಿ ಅಧ್ಯಕ್ಷ ಸದಾಶಿವ ಕೋಟ್ಯಾನ್ ಪಲಿಮಾರು, ಕಾರ್ಯದರ್ಶಿ ವಿಜಯ ಬಂಗೇರ, ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಸಹದೇವ ಕರ್ಕೇರ, ಹೆಜಮಾಡಿ ಮೊಗವೀರ ಸಭಾ ಅಧ್ಯಕ್ಷ ರವಿ ಎಚ್ ಕುಂದರ್, ಮಟ್ಟು ಮೊಗವೀರ ಸಭಾ ಅಧ್ಯಕ್ಷ ಧನಂಜಯ ಡಿ ಪುತ್ರನ್ ಉಪಸ್ಥಿತರಿದ್ದರು.

ಶರಣ್‍ಕುಮಾರ್ ಮಟ್ಟು ಸ್ವಾಗತಿಸಿದರು. ಹೆಜಮಾಡಿ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಕೇವಲ ರಸ್ತೆಗೆ ಗಮನ ನೀಡದೆ ಬಂದರಿಗೂ ಗಮನ ನೀಡಿ

40 ವರ್ಷಗಳಿಂದ ಎಲ್ಲಾ ಮುಖಂಡರು ಕೇವಲ ಭರವಸೆ ನೀಡಿದ್ದಾರೆ. ನಿಮ್ಮ ರಾಜಕೀಯ ಒಲವು ನಿಲುವು ಏನೇ ಇರಲಿ, ಕೇವಲ ರಸ್ತೆಗೆ ಗಮನ ಕೊಡದಿರಿ. ಲಾಲಾಜಿಯವರೇ ಇದು ನಿಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ.  ನಿಮ್ಮೊಂದಿಗೆ ನಾವು ಇದ್ದೇವೆ, ಸಚಿವರು ಇದ್ದಾರೆ. ಮಾಡಿದರೆ ದೊಡ್ಡ ಬೇಟೆ ಹೊಡಿಬೇಕು. ಹುಲಿ ಬೇಟೆನೇ ಮಾಡಬೇಕು. ಇದು ಮುಂದಿನ ಪೀಳಿಗೆಗೆ ದೊಡ್ಡ ಆಸ್ತಿ. ಬಂದರು ಮಾಡಲಾಗದಿದ್ದಲ್ಲಿ ಶಾಸಕರಾಗಿ ಏತಕ್ಕೆ ಇರಬೇಕು.

- ನಾಡೋಜ ಜಿ.ಶಂಕರ್. ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News