‘ಬೌನ್ಸ್’ಗೆ ಅನುಮತಿ ಇಲ್ಲ, 9 ವಾಹನಗಳು ವಶಕ್ಕೆ: ಉಡುಪಿ ಡಿಸಿ ಜಗದೀಶ್

Update: 2019-11-18 10:38 GMT

ಉಡುಪಿ, ನ.18: ‘ಬೌನ್ಸ್’ ದ್ವಿಚಕ್ರ ವಾಹನ ಬಾಡಿಗೆ ನೀಡುವ ಪದ್ಧತಿ ಯನ್ನು ವಿರೋಧಿಸಿ ಉಡುಪಿ ಹಾಗೂ ಮಣಿಪಾಲದಲ್ಲಿ ಸೋಮವಾರ ಆಟೋ ರಿಕ್ಷಾ ಬಂದ್ ಮಾಡಿ, ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಮತ್ತು ಮಣಿಪಾಲ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಮಣಿಪಾಲ ಸಂಘದ ಅಧ್ಯಕ್ಷ ಪ್ರದೀಪ್ ಪೂಜಾರಿ, ಉಡುಪಿ ತಾಲೂಕಿನಲ್ಲಿ ಸುಮಾರು 6000 ರಿಕ್ಷಾಗಳಿದ್ದು, ಇದನ್ನೇ ನಂಬಿ ಹಲವು ಕುಟುಂಬಗಳು ಜೀವನ ಸಾಗಿ ಸುತ್ತಿವೆ. ಇದೀಗ ಈ ಬಾಡಿಗೆ ದ್ವಿಚಕ್ರ ವಾಹನಗಳಿಂದ ರಿಕ್ಷಾ ಚಾಲಕರು ಬಾಡಿಗೆ ಇಲ್ಲದೆ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ. ಆದುದರಿಂದ ಇದಕ್ಕೆ ಉಡುಪಿ ಜಿಲ್ಲೆಯಲ್ಲಿ ಪರವಾನಿಗೆ ನೀಡಬಾರದು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಧರಣಿನಿರತರು ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ರಘುಪತಿ ಭಟ್, ಇದರಿಂದ ರಿಕ್ಷಾ ಚಾಲಕರಿಗೆ ಬಹಳ ದೊಡ್ಡ ಹೊಡೆತ ಬಿದ್ದಿರುವುದು ಸತ್ಯ. ಆದುದರಿಂದ ನಾವು ಮತ್ತು ಜಿಲ್ಲಾಡಳಿತ ಯಾವತ್ತು ನಿಮ್ಮ ಪರವಾಗಿರುತ್ತೇವೆ ಎಂದರು.

ಈ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಲು ನಾವು ಬಿಡುವುದಿಲ್ಲ. ಆದರೆ ಖಾಸಗಿ ಜಾಗದಲ್ಲಿ ನಿಲ್ಲಿಸದಂತೆ ಮಾಡಬೇಕಾಗಿದೆ. ಆದುದರಿಂದ ಉಡುಪಿಯಲ್ಲಿ ಪರವಾನಿಗೆ ನೀಡದಂತೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರುವ ಕೆಲಸ ಮಾಡಬೇಕು. ಈ ಕುರಿತು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸ ಬೇಕು ಎಂದು ಅವರು ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಜಗದೀಶ್, ಪೌರಾಯುಕ್ತ ಆನಂದ ಕಲ್ಲೊಳಿಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ, ಉಡುಪಿ ಮತ್ತು ಮಣಿಪಾಲ ದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಬೌನ್ಸ್ ದ್ವಿಚಕ್ರ ವಾಹನ ಬಾಡಿಗೆ ನೀಡುವ ಸೇವೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅಥವಾ ಸರಕಾರದಿಂದ ಯಾವುದೇ ಪರಾವನಿಗೆ ಇಲ್ಲ. ಆದುದರಿಂದ ಮಣಿಪಾಲದ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಲಾದ ಒಂಭತ್ತು ವಾಹನಗಳನ್ನು ಈಗಾಗಲೇ ವಶಕ್ಕೆ ಪಡೆದು ಕೊಳ್ಳಲಾಗಿದೆ ಎಂದರು.

ಪರವಾನಿಗೆಗಾಗಿ ಬೌನ್ಸ್ ಅವರಿಗೆ ಪ್ರಾಧಿಕಾರಕ್ಕೆ ಅರ್ಜಿ ಹಾಕುವಂತೆ ತಿಳಿಸಿ ದ್ದೇನೆ. ಈವರೆಗೆ ಅರ್ಜಿಯನ್ನು ಹಾಕಿಲ್ಲ. ಪರವಾನಿಗೆ ಇಲ್ಲದ ಕಾರಣ ಈ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದರೆ ವಶಪಡಿಸಿಕೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದ್ದೇನೆ. ಅದರಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಎಸ್ಪಿ ಜೊತೆ ಕೂಡ ಮಾತನಾಡುತ್ತೇನೆ. ಪರವಾನಿಗೆ ಸಿಗುವವರೆಗೆ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

ಬೌನ್ಸ್‌ಗೆ ಅನುಮತಿ ನೀಡುವುದು ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ವಿಚಾರ. ಅದನ್ನು ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ನೀವು ಹೋಗ ಬೇಕಾಗುತ್ತದೆ. ಒಮ್ಮೆ ಅನುಮತಿ ಸಿಕ್ಕಿದರೆ ಮತ್ತೆ ನಮಗೆ ಅದನ್ನು ತಡೆಯಲು ಆಗುವುದಿಲ್ಲ. ಅವರು ಖಾಸಗಿ ಜಾಗದಲ್ಲಿ ನಿಲ್ಲಿಸಿದರೆ ನಮಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಡಿಸಿ, ಶಾಸಕರ ಭರವಸೆ: ಬಂದ್ ವಾಪಾಸ್ಸು

ದ್ವಿಚಕ್ರ ವಾಹನ ಬಾಡಿಗೆ ನೀಡುವ ಪದ್ಧತಿಯನ್ನು ವಿರೋಧಿಸಿ ಉಡುಪಿ ಹಾಗೂ ಮಣಿಪಾಲದಲ್ಲಿ ಬೆಳಗ್ಗೆ 6ಗಂಟೆಯಿಂದ ಆಟೋ ರಿಕ್ಷಾಗಳು ಓಡಾಟ ನಡೆಸದೆ ಬಂದ್ ಆಚರಿಸಿದ್ದವು. ಕೆಲವು ನಿಲ್ದಾಣಗಳಲ್ಲಿ ರಿಕ್ಷಾಗಳನ್ನು ಹಿಮ್ಮುಖ ವಾಗಿ ನಿಲ್ಲಿಸಿ ಬಂದ್ ನಡೆಸಿದ್ದವು. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆ ರಿಕ್ಷಾ ಬಂದ್‌ನ್ನು ವಾಪಾಸ್ಸು ಪಡೆದು ಕೊಳ್ಳಲಾಯಿತು. ‘ಇವರ ಭರವಸೆಯಂತೆ ಬಂದ್ ಮತ್ತು ಧರಣಿಯನ್ನು ವಾಪಾಸ್ಸು ಪಡೆದುಕೊಳ್ಳಲಾಗಿದೆ. ಒಂದು ವೇಳೆ ಐದು ದಿನಗಳಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸ ಲಾಗುವುದು’ ಎಂದು ಸಂಘದ ಮಣಿಪಾಲ ಅಧ್ಯಕ್ಷ ಪ್ರದೀಪ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಧರಣಿಯಲ್ಲಿ ಜಿಲ್ಲಾ ರಿಕ್ಷಾ ಚಾಲಕರ ಮತ್ತು ಮಾಲಕರ ಒಕ್ಕೂಟದ ಅಧ್ಯಕ್ಷ ಮಹೇಶ್ ಠಾಕೂರ್, ಮಣಿಪಾಲ ಸಂಘದ ಕಾರ್ಯದರ್ಶಿ ಹರೀಶ್ ಪೂಜಾರಿ, ಆಶ್ರಯದಾತ ಅಟೋ ಯೂನಿಯನ್ ಉಪಾಧ್ಯಕ್ಷ ಮುಹಮ್ಮದ್ ರಫೀಕ್, ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ಕನ್ನರ್ಪಾಡಿ ದೇವಳದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ನಗರ ಸಭಾ ಸದಸ್ಯರುಗಳಾದ ರಮೇಶ್ ಕಾಂಚನ್, ಬಾಲಕೃಷ್ಣ ಶೆಟ್ಟಿ, ಮಾಜಿ ನಗರಸಭೆ ಸದಸ್ಯರಾದ ಶಶಿರಾಜ್ ಕುಂದರ್, ಸುಕೇಶ್ ಕುಂದರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News