ಚಿದಂಬರಂ ಜಾಮೀನು ತೀರ್ಪಿನ ಪ್ರಮಾದ ಸರಿಪಡಿಸುವಂತೆ ಅಪೀಲು ಸಲ್ಲಿಸಿದ ಜಾರಿ ನಿರ್ದೇಶನಾಲಯ

Update: 2019-11-18 11:46 GMT

ಹೊಸದಿಲ್ಲಿ :  ಐಎನ್‍ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಿ  ಹೊರಡಿಸಲಾಗಿರುವ ಆದೇಶದಲ್ಲಾಗಿರುವ `ಪ್ರಮಾದವಶಾತ್ ದೋಷ' ಸರಿಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸೋಮವಾರ ದಿಲ್ಲಿ ಹೈಕೋರ್ಟ್‍ಗೆ ಅಪೀಲು ಸಲ್ಲಿಸಿದೆ.

ನ.15ರಂದು ನ್ಯಾಯಮೂರ್ತಿ ಸುರೇಶ್ ಕೈಟ್ ಅವರು ತಮ್ಮ ಆದೇಶದಲ್ಲಿ ಮಾಡಿರುವ ಆಕಸ್ಮಿಕ ತಪ್ಪನ್ನು ಸರಿ ಪಡಿಸಿ ಎಂದು ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಮನವಿ ಸಲ್ಲಿಸಿದೆ.

ನ್ಯಾಯಮೂರ್ತಿ ಸುರೇಶ್ ತಮ್ಮ ಆದೇಶದಲ್ಲಿ  ದಿಲ್ಲಿ ಮೂಲದ ವಕೀಲ ರೋಹಿತ್ ಟಂಡನ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನಿರಾಕರಿಸುವ ಸಂದರ್ಭ 2017ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಕೆಲ ಪ್ಯಾರಾಗಳನ್ನೇ  ಯಥಾವತ್ತಾಗಿ ಚಿದಂಬರಂ ಪ್ರಕರಣದಲ್ಲೂ ಬಳಸಿದ್ದರು.

ಒಟ್ಟು 61 ಪುಟಗಳ ತಮ್ಮ ಆದೇಶದ ಪ್ಯಾರಾ 35, 36, 39 ಹಾಗೂ 40ರಲ್ಲಿ ಈ ಪ್ರಮಾದ ಎಸಗಿದ್ದರು. ಟಂಡನ್ ಪ್ರಕರಣಕ್ಕೂ ಚಿದಂಬರಂ ಪ್ರಕರಣಕ್ಕೂ ಯಾವುದೇ  ಸಂಬಂಧ ಇಲ್ಲವಾಗಿದ್ದು ಟಂಡನ್‍ರನ್ನು ಅಮಾನ್ಯೀಕರಣ ಕುರಿತಾದ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News