ಮತ್ತೊಂದು ಗಡುವಿಗೆ ಸಿದ್ಧವಾಗುವುದೇ ಪಂಪ್‌ವೆಲ್ ಮೇಲ್ಸೇತುವೆ !

Update: 2019-11-18 14:06 GMT

ಮಂಗಳೂರು, ನ.18: ಪಂಪ್‌ವೆಲ್‌ನ ಮೇಲ್ಸೇತುವೆ ಕಾಮಗಾರಿ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ವ್ಯಂಗ್ಯ, ಮಂಗಳೂರು ನಾಗರಿಕರ ಆಕ್ರೋಶಕ್ಕೆ ತುತ್ತಾಗಿ ಐತಿಹಾಸಿಕ ಸ್ಮಾರಕವಾಗಿ ಕುಖ್ಯಾತಿಗೆ ಒಳಗಾಗಿದೆ. ಇದೀಗ ಮುಂದುವರಿದ ಅಸಮಾಧಾನದ ಮಾರ್ಗವಾಗಿ ಮಂಗಳೂರು ನಾಗರಿಕರ ಗುಂಪು ಗಾಳಿಪಟ ಹಾರಿಸುವ ಮೂಲಕ ವ್ಯಂಗ್ಯ ರೂಪ ಪ್ರತಿರೋಧಕ್ಕೆ ಚಿಂತನೆ ನಡೆಸಿದೆ.

ಕಳೆದ ಸುಮಾರು 10 ವರ್ಷಗಳಿಂದ ಕುಂಟುತ್ತಾ ಸಾಗಿರುವ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಕುರಿತಂತೆ ಒಂದರ ಮೇಲೊಂದರಂತೆ ಗಡುವುಗಳನ್ನು ನೀಡುತ್ತಾ ಸಾಗಲಾಗಿದೆ. ಹಲವು ಗಡುವುಗಳನ್ನು ಮೀರಿ ಮುಂದುವರಿದಿರುವ ಕಾಮಗಾರಿಗೆ ನ.16ರಂದು ಸಂಸದ ನಳಿನ್ ಕುಮಾರ್ ಭೇಟಿ ನೀಡಿ ಡಿಸೆಂಬರ್ 31ಕ್ಕೆ ಕಾಮಗಾರಿ ಮುಕ್ತಾಯಗೊಂಡು ಜನವರಿ ಮೊದಲ ವಾರದಲ್ಲಿ ಉದ್ಘಾಟನೆಯ ಗಡುವು ನೀಡಿದ್ದಾರೆ.

ಆದರೆ ಅಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ನೋಡಿದರೆ, ಅದು ಅಸಾಧ್ಯ. ಸಂಸದರು ಕೇವಲ 'ಗಾಳಿಪಟ' ಹಾರಿಸುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸಂಸದರ ಮಾತಿಗೆ ಯಾವುದೇ ಕಿಮ್ಮತ್ತಿಲ್ಲದಂತೆ ಅಲ್ಲಿಯ ಕಾಮಗಾರಿ ನಡೆಯುತ್ತಿದೆ. ಸಂಸದರು ಖುದ್ದು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕವೂ ಮೇಲ್ಸೇತುವೆಯಲ್ಲಿ ಕೇವಲ ಒಂದು ಜೆಸಿಬಿ ಹಾಗೂ ನಾಲ್ಕೈದು ಮಂದಿ ಕೆಲಸಗಾರರು ಮಾತ್ರವೇ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ಇನ್ನೂ ಸಾಕಷ್ಟು ಮಣ್ಣು ತುಂಬಿಸುವುದು ಸೇರಿದಂತೆ ಬಾಕಿ ಇರುವಂತಹ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವುದಾದರೂ ಹೇಗೆ ? ಎಂಬುದು ನಾಗರಿಕರ ಪ್ರಶ್ನೆ.

''ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಕಂಪನಿಯು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಮಾತ್ರವಲ್ಲದೆ, ಪದೇ ಪದೇ ಜಿಲ್ಲೆಯ ಹಿರಿಯ ಅಧಿಕಾರಿಗಳು, ಸಂಸದರ ಮಾತಿಗೂ ಬೆಲೆ ನೀಡುತ್ತಿಲ್ಲ. ಅಧಿಕಾರಿಗಳು ಹಾಗೂ ಸಂಸದರ ಮಾತುಗಳು ಕೇವಲ ನಾವು ತಮಾಷೆಗೆ ಹೇಳುವಂತೆ 'ರೈಲು ಬಿಡುವುದು ಅಥವಾ ಗಾಳಿಪಟ ಹಾರಿಸುವುದು' ಹಾಗಾಗಿದೆ. ಆದ್ದರಿಂದ ಈ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವು ಪಂಪ್‌ವೆಲ್ ಮೇಲ್ಸೇತುವೆ ಬಳಿ ಗಾಳಿಪಟ ಹಾರಿಸುವ ಮೂಲಕ ವ್ಯಂಗ್ಯ ರೂಪದ ಪ್ರತಿಭಟನೆಗೆ ಚಿಂತನೆ ನಡೆಸಿದ್ದೇವೆ'' ಎಂದು ಮಂಗಳೂರು ನಾಗರಿಕರ ಗುಂಪಿನ ರೂಪನ್ ಫೆರ್ನಾಂಡಿಸ್ ತಿಳಿಸಿದ್ದಾರೆ.

''ಪಂಪ್‌ವೆಲ್ ಕಾಮಗಾರಿ ನಿಧಾನಗತಿಗೆ ಸಂಬಂಧಿಸಿ ನಾವು ಯಾರನ್ನೂ ವಿರೋಧಿಸುತ್ತಿಲ್ಲ. ಬದಲಾಗಿ ಸಹನಾಶೀಲರಾಗಿರುವ ಮಂಗಳೂರು ಜನತೆಗೆ ಒಂದರ ಮೇಲೊಂದರಂತೆ ಗಡುವುಗಳನ್ನೇ ನೀಡಿ ಸಹನೆಯನ್ನು ಪರೀಕ್ಷಿಸಲಾಗುತ್ತಿದೆ. ಹಾಗಿದ್ದರೂ ತೆರಿಗೆ ಕಟ್ಟುವವರಾದ ನಾವು ಇನ್ನೂ ತಾಳ್ಮೆಯಿಂದಲೇ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಲೇ ಇದ್ದೇವೆ. ಇತ್ತೀಚೆಗೆ ಸಂಸದರು ಭೇಟಿ ನೀಡಿದ ಸಂದರ್ಭ ಅಲ್ಲಿದ್ದ ಅಧಿಕಾರಿಗಳೇ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಅನಿಶ್ಚಿತತೆ ವ್ಯಕ್ತಪಡಿಸಿರುವುದು ವೀಡಿಯೋದಲ್ಲಿ ಬಹಿರಂಗವಾಗಿದೆ. ಹಾಗಿದ್ದರೂ ಜನವರಿ ಮೊದಲ ವಾರದಲ್ಲಿ ಸೇತುವೆ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಗೊಳ್ಳುವುದು ಎಂಬ ಸಂಸದರ ಹೇಳಿಕೆ ನಿಜವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಕಾಮಗಾರಿ ವೇಗ ಪಡೆಯುತ್ತಿಲ್ಲ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವು 'ಗಾಳಿಪಟ' ಹಾರಿಸಲು ನಿರ್ಧರಿಸಿದ್ದೇವೆ'' ಎಂದು ರೂಪನ್ ತಿಳಿಸಿದ್ದಾರೆ.

ಮಂಗಳೂರಿನ ನಾಗರಿಕರು ಪ್ರಜ್ಞಾವಂತರು. ಮಾತ್ರವಲ್ಲದೆ, ಬಹಳಷ್ಟು ತಾಳ್ಮೆಯನ್ನು ಹೊಂದಿದವರು. ಹಾಗಾಗಿಯೇ ಹಲವು ವರ್ಷಗಳಿಂದ ಈ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯ ನಿಧಾನಗತಿಯಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ಹಾಸ್ಯಚಟಾಕಿಗಳ ಮೂಲಕವಷ್ಟೇ ನಾವು ನಮ್ಮ ಅಸಮಾಧಾನವನ್ನು ತೋರ್ಪಡಿಸುತ್ತಿದ್ದೇವೆ. ಪ್ರತಿ ಬಾರಿಯು ಅಧಿಕಾರಿಗಳು, ಜನಪ್ರತಿನಿಧಿಗಳ ಮಾತು ಕೇವಲ ಸೂತ್ರವಿಲ್ಲದ ಗಾಳಿಪಟದಂತೆ ಹಾರಿಹೋಗುತ್ತಿದೆ. ಹಾಗಾಗಿ ಈ ಬಾರಿಯಾದರೂ ಮಾತು ಕಾರ್ಯರೂಪಕ್ಕೆ ಬರಲಿ. ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಪಂಪ್‌ವೆಲ್ ಮೇಲ್ಸೇತುವೆ ಉಪಯೋಗಕ್ಕೆ ಬರಲಿ ಎಂಬ ಆಶಯದೊಂದಿಗೆ ವಿನೂತನ ಗಾಳಿಪಟ ಪ್ರಹಸನಕ್ಕೆ ಮಂಗಳೂರಿ ನಾಗರಿಕರ ಗುಂಪು ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News