'ಯೋಗಾಭ್ಯಾಸದಿಂದ ಸ್ವಾರ್ಥ ಚಿಂತನೆ ಅಲ್ಲ, ಪರಮಾರ್ಥ ಚಿಂತನೆ'

Update: 2019-11-18 14:12 GMT

ಉಡುಪಿ, ನ.18: ಯೋಗಾಭ್ಯಾಸದಿಂದ ಮನುಷ್ಯನಲ್ಲಿ ಸ್ವಾರ್ಥ ಚಿಂತನೆ ಅಲ್ಲ, ಪರಮಾರ್ಥ ಚಿಂತನೆ ಮೂಡುತ್ತದೆ, ಸ್ವಪ್ರೇರಣೆ, ಸ್ವಸ್ಪರ್ಧೆ ಉಂಟಾಗುತ್ತದೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಉಡುಪಿಯಲ್ಲಿ ಸೋಮವಾರ ಮೂರನೆಯ ದಿನದ ಯೋಗ ಶಿಬಿರದಲ್ಲಿ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ಯೋಗಾಸನ ಮಾಡುತಿದ್ದರೆ ಇನ್ನಾರೋ ಪ್ರೇರಣೆ, ಸ್ಫೂರ್ತಿ ನೀಡಬೇಕಾಗಿಲ್ಲ. ಸ್ಪರ್ಧೆ ಇನ್ನೊಬ್ಬರೊಂದಿಗೆ ಅಲ್ಲ. ತಮ್ಮೊಳಗೇ ಸ್ಪರ್ಧೆ ಮಾಡುವ ಸ್ಥಿತಿ ಬರುತ್ತದೆ. ಪಾರಮಾರ್ಥಿಕ ಚಿಂತನೆ ವ್ಯಕ್ತಿಗಳಲ್ಲಿ ಮೂಡುತ್ತದೆ ಎಂದರು.

ಯೋಗದಿಂದ ಜ್ಞಾನಸಿದ್ಧಿ, ಕ್ರಿಯಾಶುದ್ಧಿ, ಜ್ಞಾನಶುದ್ಧಿಯಾಗುತ್ತದೆ. ಮುಂಜಾನೆ ಬೇಗ ಎದ್ದು ಯೋಗಾಭ್ಯಾಸ ನಡೆಸಿದರೆ ಕಳ್ಳರು, ಮದ್ಯಮಾನಿಗಳು, ತಪ್ಪೆಸಗುವವರು, ಅವಿದ್ಯಾವಂತರು ಇಲ್ಲವಾಗುತ್ತಾರೆ. ಇಡೀ ಭಾರತದಲ್ಲಿ ಎಲ್ಲರೂ ಹೀಗೆ ಮಾಡಿದರೆ ಆದರ್ಶ ಭಾರತ ನಿರ್ಮಾಣವಾಗುತ್ತದೆ ಎಂದರು.

ಯೋಗ ಸಾಧನೆಯಿಂದ ಪೂರ್ಣ ವಿವೇಕ, ಭಕ್ತಿ, ಸಮರ್ಪಣ ಮನೋಭಾವ ಉಂಟಾಗುತ್ತದೆ. ಮುಖದಲ್ಲಿ ಸದಾ ಪ್ರಸನ್ನತೆ ಇರಲು ನಿತ್ಯಯೋಗಾಭ್ಯಾಸಿ ಯಾಗಬೇಕು. ನಮ್ಮ ಆಚಾರ ವಿಚಾರ ಪವಿತ್ರ ಆಗಬೇಕು. ಯೋಗ ಎಂಬುದು ಜೀವನಶೈಲಿ ಎಂದು ರಾಮ್‌ದೇವ್ ಹೇಳಿದರು.

ಶಿಬಿರದ ಮೂರನೇ ದಿನದ ಉಡುಪಿ ಆಸುಪಾಸಿನ ಜನರ ಯೋಗ ಉತ್ಸಾಹ ಕಡಿಮೆಯಾಗಿರಲಿಲ್ಲ. ಶಿಬಿರ ಪ್ರಾರಂಭಗೊಳ್ಳುವ ಮುಂಜಾನೆ ಐದು ಗಂಟೆಗೆ ತುಂಬಾ ಮೊದಲೇ ಜನರು ಶಿಬಿರ ಸ್ಥಳದಲ್ಲಿರುತ್ತಿದ್ದರು. ಬಂದವರಲ್ಲಿ ಸಾಕಷ್ಟು ಮಂದಿಗೆ ಯೋಗ ಮಾಡುವುದಕ್ಕಿಂತಲೂ ರಾಮ್‌ದೇವ್ ಅವರನ್ನು ನೋಡುವ ಕುತೂಹಲವಿರುವುದು ಕಂಡುಬರುತ್ತಿತ್ತು.

ಇಂದಿನ ಚಟುವಟಿಕೆಗಳನ್ನು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಪರ್ಯಾಯ ಪಲಿಮಾರು ಶ್ರೀ, ಶಾಸಕ ವಿ.ಸುನೀಲ್‌ಕುಮಾರ್, ಗಣ್ಯರಾದ ನಾಗರಾಜ ಬಲ್ಲಾಳ್, ರಾಮಕೃಷ್ಣ ಶರ್ಮ ಬಂಟಕಲ್ಲು ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಪತಂಜಲಿ ಸಮಿತಿ ಅಧ್ಯಕ್ಷ ಕರಂಬಳ್ಳಿ ಶಿವರಾಮ ಶೆಟ್ಟಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News