ನನ್ನ ವಿರುದ್ಧ ಸಾವಿರಕ್ಕೂ ಅಧಿಕ ಕೇಸುಗಳಿವೆ: ರಾಮದೇವ್

Update: 2019-11-18 14:18 GMT

ಉಡುಪಿ, ನ. 18: ಯೋಗಗುರುವಾದ ತನ್ನ ವಿರುದ್ಧವೂ ಕೆಳ ನ್ಯಾಯಾಲಯ ದಿಂದ ಹಿಡಿದು ಸರ್ವೋಚ್ಛ ನ್ಯಾಯಾಲಯದವರೆಗೆ ಒಂದು ಸಾವಿರಕ್ಕೂ ಅಧಿಕ ಕೇಸುಗಳಿವೆ. ಕೆಲವು ಕೇಸುಗಳಲ್ಲಿ ಕಪಿಲ್ ಸಿಬಲ್‌ರಂತಹ ಹಿರಿಯ, ಅನುಭವಿ ವಕೀಲರೂ ತಮ್ಮ ವಿರುದ್ಧ ವಾದಿಸುತ್ತಿದ್ದಾರೆ ಎಂದು  ಬಾಬಾ ರಾಮದೇವ್ ಬಹಿರಂಗ ಪಡಿಸಿದರು.

ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಸೋಮವಾರ ಯೋಗಾಭ್ಯಾಸದ ನಡುವೆ ಅವರು ಈ ವಿಷಯ ಹೊರಗೆಡಹಿದರು. ತಾನು ಯಾವುದೇ ಅಪರಾಧ ಪ್ರಕರಣಗಳನ್ನು ನಡೆಸದಿದ್ದರೂ ಈ ಪರಿಸ್ಥಿತಿ ಇದೆ ಎಂದರು.

ನನ್ನನ್ನು ಕೆಲವರು ಬ್ರಾಹ್ಮಣ ವಿರೋಧಿಗಳೆನ್ನುತ್ತಾರೆ. ಇನ್ನು ಕೆಲವರು ಹಿಂದುಳಿದ ವರ್ಗಗಳ ವಿರೋಧಿ ಎನ್ನುತ್ತಾರೆ. ಇ.ವಿ.ರಾಮಸ್ವಾಮಿ ಬೆಂಬಲಿ ಗರು ಬೌದ್ಧಿಕ ಉಗ್ರಗಾಮಿಗಳು ಎಂದು ಇತ್ತೀಚಿನ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದು, ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ನಾನು ದಲಿತರಿಗೂ ಸನ್ಯಾಸ ದೀಕ್ಷೆ ನೀಡಿದ್ದೇನೆ. ನಾನೆಂದೂ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ನೋಡಿಲ್ಲ. ಪೆರಿಯಾರ್ ಅನುಯಾಯಿಗಳು ನೇತ್ಯಾತ್ಮಕ ವಿಷಯಗಳನ್ನೇ ಸಮಾಜದಲ್ಲಿ ಬಿತ್ತುತ್ತಾರೆ ಎಂದು ರಾಮದೇವ್ ನುಡಿದರು.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವರ್ಣಗಳು ದೇಹದ ಒಂದೊಂದು ಅಂಗವನ್ನು ಪ್ರತಿಪಾದಿಸುತ್ತವೆ. ತಲೆ ಭಾಗ ಬ್ರಾಹ್ಮಣನಾಗಿದ್ದು ಇದು ಕಾಲೆಂಬ ಶೂದ್ರ ವರ್ಣಕ್ಕೆ ತಲೆಬಾಗುತ್ತವೆ ಎಂದರೂ ಇದರಲ್ಲಿ ಹುಳುಕು ಹುಡುಕುತ್ತಾರೆ. ಭಗವಾನ್ ಕೃಷ್ಣ ಒಬಿಸಿ ವರ್ಗದ ಗುರು. ರಾಮ ಮತ್ತು ಕೃಷ್ಣ ಸೂರ್ಯ ಮತ್ತು ಚಂದ್ರವಂಶದಲ್ಲಿ ಹುಟ್ಟಿದವರು.ನಾವು ಜಾತಿವಾದವನ್ನು ನೋಡದೆ ಭಾರತೀಯ ಎನ್ನುವುದನ್ನು ಮಾತ್ರ ನೋಡುತ್ತೇವೆ ಎಂದರು.

ಯೋಗದಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದರೂ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ನನಗೆ ಬೈಪಾಸ್ ಸರ್ಜರಿಯಾಗಿದೆ, ಜರ್ಮನಿಯಲ್ಲಿ ಕಾಲಿನ ಮಂಡಿ ಸರ್ಜರಿಯಾಗಿದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ನಾನು ಸನ್ಯಾಸಿಯಾಗಿರಬಹುದು. ನಮ್ಮ ಉತ್ಪನ್ನಗಳನ್ನು ವ್ಯಾಪಾರ ಮಾಡುವ ಉದ್ದೇಶದಿಂದ ಮಾಡುತ್ತಿಲ್ಲ. ನನ್ನಲ್ಲಿ 500 ಮಂದಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಇದಕ್ಕಾಗಿ 500 ಕೋ.ರೂ. ಯೋಜನೆ ನಡೆಯುತ್ತಿದೆ ಎಂದರು. ಮಧುಮೇಹ ಸಮಸ್ಯೆಗೆ ಮಂಡೂಕಾಸನ, ಉತ್ತಾನಪಾದಾಸನ ಅತ್ಯುತ್ತಮ ಪರಿಹಾರ. ಬೆನ್ನುಹುರಿ ಸಮಸ್ಯೆಗೆ ನಿಂತುಕೊಂಡು ಮಾಡುವ ಯೋಗಸನಗಳು ಪರಿಣಾಮಕಾರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News