ಧರ್ಮಸ್ಥಳದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ ಆಚರಣೆ

Update: 2019-11-18 14:24 GMT

ಬೆಳ್ತಂಗಡಿ: ರೋಗಿಗಳ ಸೇವೆಯೇ ದೇವರ ಸೇವೆ ವೈದ್ಯರು ಮಾನವೀಯತೆಯೊಂದಿಗೆ ಹಾಗೂ ನಗುಮುಖದಿಂದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇದೇವರ ಸೇವೆಯಾಗಿದೆಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಎರಡನೆ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಆಸ್ಪತ್ರೆ, ಜೈಲು ಮತ್ತುರುದ್ರಭೂಮಿ ನೋಡಿದಾಗ ನಮಗೆ ಆಧುನಿಕ ಜೀವನದ ಸಮಸ್ಯೆಗಳ ಅರಿವಾಗುತ್ತದೆ. ಆಧುನಿಕ ಜೀವನ ಶೈಲಿ, ಆಹಾರ ಸೇವನಾ ಕ್ರಮ, ಸದಾಒತ್ತಡದ ಕೆಲಸಗಳು, ಅತಿಯಾದ ತಂತ್ರಜ್ಞಾನದ ಬಳಕೆ, ವಾಯುಮಾಲಿನ್ಯ ಮೊಬೈಲ್ ಫೋನ್ ಬಳಕೆ ಇತ್ಯಾದಿ ಕಾರಣಗಳಿಂದ ಇಂದು ಎಳೆಯ ಪ್ರಾಯದಲ್ಲೇ ಮನುಷ್ಯರು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ ಮೊದಲಾದ ಭೀಕರ ರೋಗಗಳಿಗೆ ಬಲಿಯಾಗುತ್ತಾರೆ. ಯೋಗ ಮತ್ತು ಪ್ರಕೃತಿಚಿಕಿತ್ಸಾ ವಿಧಾನದಿಂದ ನಾವು ಸಂಪೂರ್ಣ ಆರೋಗ್ಯ ಭಾಗ್ಯವನ್ನು ಹೊಂದಬಹುದು ಎಂದು ಅವರು ಹೇಳಿದರು.

ಕೀಳರಿಮೆ ಹಾಗೂ ಅಹಂ ತ್ಯಜಿಸಿ ಧನಾತ್ಮಕಚಿಂತನೆಯೊಂದಿಗೆ ಸದಾ ಒಳ್ಳೆಯ ಕೆಲಸಗಳನ್ನು ಮಾಡಬೇಕು. ವೈದ್ಯರು ರೋಗಿಗಳೊಂದಿಗೆ ನಗುಮೊಗದಿಂದ ಮಾನವೀತೆಯಿಂದ ಮಾತನಾಡಿ, ಶುಶ್ರೂಷೆ ನೀಡಬೇಕು. ಅಲೋಪತಿ, ಹೋಮಿಯೋಪತಿ, ನೇಚುರೋಪತಿ ಇತ್ಯಾದಿ ವೈದ್ಯಕೀಯ ಪದ್ಧತಿಗಳಿಗಿಂತಲೂ ಮಿಗಿಲಾಗಿ ವೈದ್ಯರಿಗೆ ರೋಗಿಗಳಲ್ಲಿ “ಸಿಂಪತಿ” ಇರಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಾವು ಪಂಚೇಂದ್ರಿಯಗಳ ದಾಸರಾಗಬಾರದು. ಒಡೆಯರಾಗಬೇಕು. ಪಂಚೇಂದ್ರೀಯಗಳ ನಿಯಂತ್ರಣದಿಂದ ರೋಗರಹಿತವಾಗಿ ಆರೋಗ್ಯಪೂರ್ಣ ಜೀವನ ನಡೆಸಬಹುದು. ಧಾರ್ಮಿಕ ಆಚಾರ-ವಿಚಾರಗಳ ಅನುಷ್ಠಾದಿಂದ, ಸದಾಚಾರದೊಂದಿಗೆ ಆದರ್ಶ ಜೀವನ ನಡೆಸಬೇಕು. ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯೋಗ, ಪ್ರಾರ್ಥನೆ, ಧ್ಯಾನ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿಯನ್ನು ಸ್ವಯಂ ಅನುಷ್ಠಾನ ಮಾಡಿ “ಆಚಾರ್ಯ” ರಾದರು ಎಂದು ಹೇಳಿದರು. ಪ್ರಕೃತಿಚಿಕಿತ್ಸಾ ವೈದ್ಯರು ಕೀಳರಿಮೆ ಹೊಂದದೆ ಅಭಿಮಾನದಿಂದ ಈ ಪದ್ಧತಿಯ ರಾಯಭಾರಿಗಳಾಗಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಡಾ. ನವೀನ್ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಕೃತಿಚಿಕಿತ್ಸಾ ದಿನಾಚರಣೆಯ ಮಹತ್ವ ವಿವರಿಸಿದರು.ಆಯುಷ್‍ಇಲಾಖೆಯ ಜಂಟಿ ನಿರ್ದೇಶಕಡಾ. ಶ್ರೀಧರ ಭಟ್, ಹೇಮಾವತಿ ವಿ. ಹೆಗ್ಗಡೆಯವರು, ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು. ಎಸ್.ಡಿ.ಎಂ.ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು.

ಮೂಡಬಿದ್ರೆಯ ಆಳ್ವಾಸ್ ಪ್ರಕೃತಿಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲೆ ಡಾ.ವನಿತಾರೈ ಧನ್ಯವಾದವಿತ್ತರು. ಜೋಸ್ನಾ ಮತ್ತು ಅನನ್ಯ ಕಾರ್ಯಕ್ರಮ ನಿರ್ವಹಿಸಿದರು. ಎಂಟು ಕಾಲೇಜುಗಳಿಂದ ಮುನ್ನೂರು ಪ್ರತಿನಿಧಿಗಳು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News