ಮೋದಿ ಸರಕಾರ ಶ್ರೀಮಂತರ ಪರ, ಬಡವರ ವಿರೋಧಿ: ತಿರುನಾವುಕ್ಕರಸು

Update: 2019-11-18 14:30 GMT

ಉಡುಪಿ, ನ.18: ಪ್ರಸ್ತುತ ಅಧಿಕಾರದಲ್ಲಿರುವ ಮೋದಿ ಸರಕಾರ ಶ್ರೀಮಂತರ, ಬಂಡವಾಳ ಶಾಹಿಗಳ ಪರವೇ ಹೊರತು ಬಡವರ, ಕಾರ್ಮಿಕರ ಪರ ಅಲ್ಲ. ಶ್ರೀಮಂತರಿಗೆ ಕೋಟಿ ಕೋಟಿ ಹಣ ನೀಡುವ ಮೋದಿ, ಬಡವರ ಯೋಜನೆಗಳ ಅನುದಾನವನ್ನು ಕಡಿತಗೊಳಿಸುತ್ತಿದ್ದಾರೆ ಎಂದು ನವದೆಹಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ತಿರುನಾವುಕ್ಕರಸು ಆರೋಪಿಸಿದ್ದಾರೆ.

ಮನೆ, ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರಿ/ಖಾಸಗಿ ಜಾಗ ಗುರುತಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದಿನಿಂದ ಆರಂಭಗೊಂಡ ನಿವೇಶನ ರಹಿತರ ಅನಿರ್ಧಿಷ್ಟಾವಧಿ ಧರಣಿ ಮುಷ್ಕರವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮೋದಿ ಸರಕಾರ ಬಂಡವಾಳಶಾಹಿಗಳಿಗೆ 17ಲಕ್ಷ ಕೋಟಿ ರೂ. ನೀಡಿದ್ದು, 3500ಲಕ್ಷ ಕೋಟಿ ತೆರಿಗೆ ಮನ್ನಾ ಮಾಡಿದೆ. ಆದರೆ ಬಡವರಿಗೆ ಉದ್ಯೋಗ ನೀಡದೆ ವಂಚನೆ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಬಡವರಿಗೆ ಯೋಜನೆ ನೀಡುವ ಬದಲು ಇರುವ ಯೋಜನೆಗಳನ್ನೇ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಸಾಮಾಜಿಕ ಭದ್ರತೆಗೆ ಕೇಂದ್ರ ಸರಕಾರ ನೀಡುತ್ತಿದ್ದ ಅನುದಾನವನ್ನು ಕಡಿತ ಮಾಡಲಾಗಿದೆ ಎಂದು ಅವರು ದೂರಿದರು.

ಸರಕಾರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ. ಸರಕಾರ ಖಜಾನೆ ಖಾಲಿ ಯಾಗಿದ್ದು, ಸರಕಾರಿ ನೌಕರರಿಗೆ ಸಂಬಳ ಕೊಡಲು ಹಣ ಇಲ್ಲವಾಗಿದೆ. ಬಿಜೆಪಿ ಪಕ್ಷವು ಕಳೆದ ಲೋಕಸಭಾ ಚುನಾವಣೆ ಸಂದರ್ಭ ಬಂಡವಾಳಶಾಹಿಗಳಿಂದ 1150ಕೋಟಿ ರೂ. ಪಾರ್ಟಿ ಫಂಡ್ ರೂಪದಲ್ಲಿ ಪಡೆದುಕೊಂಡಿದೆ. ಆದು ದರಿಂದ ಈ ಸರಕಾರ ಎಂದಿಗೂ ಅವರ ಪರವಾಗಿಯೇ ಇರುತ್ತದೆ ಎಂದು ಅವರು ಆರೋಪಿಸಿದರು.

ದೇಶದಲ್ಲಿ 10.50ಲಕ್ಷ ಗ್ರಾಮಾಂತರ ಕೃಷಿಕೂಲಿಕಾರರು ಬಡತನದಿಂದ ಜೀವ ಸಾಗಿಸುತ್ತಿದ್ದಾರೆ. ಅವರಿಗೆ ಕನಿಷ್ಠ ವೇತನ ಕೂಡ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕಳೆದ 40-50ವರ್ಷಗಳಿಂದ ಇರುವ ಮನೆ ಹಾಗೂ ನಿವೇಶನ ರಹಿತರಿಗೆ ತುಂಡು ಭೂಮಿಯನ್ನು ಕೂಡ ಸರಕಾರ ನೀಡಿಲ್ಲ ಎಂದ ಅವರು, ಪ್ರತಿಯೊಬ್ಬರಿಗೂ ನಿವೇಶನ ನೀಡುವುದು ಕೇಂದ್ರ ಹಾಗೂ ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಆದರೆ ಕಳೆದ ಏಳು ದಶಕಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರಗಳು ನಿವೇಶನ ರಹಿತರನ್ನು ಕಣ್ಣೆತ್ತಿಯು ನೋಡಿಲ್ಲ ಎಂದು ಟೀಕಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಸರಕಾರಿ/ಖಾಸಗಿ ಜಾಗ ಗುರುತಿಸಿ ಹಕ್ಕುಪತ್ರ ನೀಡಬೇಕು. ಜಿಲ್ಲೆಯ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಬೇಕು. ಕುಂದಾಪುರ ತಾಲೂಕಿನಲ್ಲಿ ಖಾಸಗಿ ಜಾಗ ಖರೀದಿಸಲು ಪ್ರಸ್ತಾವನೆ ಲ್ಲಿಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಯು.ದಾಸ ಭಂಡಾರಿ, ಕೋಶಾಧಿಕಾರಿ ಕವಿರಾಜ್ ಎಸ್., ಉಪಾಧ್ಯಕ್ಷ ರಾಜೀವ ಪಡುಕೋಣೆ, ಉಡುಪಿ ತಾಲೂಕು ಅಧ್ಯಕ್ಷ ಎಚ್.ವಿಠಲ ಪೂಜಾರಿ, ಕೋಶಾಧಿಕಾರಿ ಉಮೇಶ್ ಕುಂದರ್, ಕುಂದಾಪುರ ತಾಲೂಕು ಕಾರ್ಯದರ್ಶಿ ನಾಗರತ್ನ ನಾಡ, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಕಾರ್ಕಳ ತಾಲೂಕು ಅಧ್ಯಕ್ಷೆ ಸವಿತಾ ಶೆಟ್ಟಿ, ಕಾರ್ಯದರ್ಶಿ ಪದ್ಮ ಅಮೀನ್, ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ್, ಮಹಾಬಲ ವಡೇರಹೊಬಳಿ, ಬಲ್ಕೀಸ್ ಕುಂದಾಪುರ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News