ಸಿಯಾಚಿನ್ ಸಮೀಪ ಭಾರೀ ಹಿಮಪಾತ: ಹಿಮದಡಿ ಸಿಲುಕಿದ 8 ಸೈನಿಕರು
Update: 2019-11-18 20:20 IST
ಹೊಸದಿಲ್ಲಿ, ನ.18: ಉತ್ತರ ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ಸೋಮವಾರ ಭಾರೀ ಹಿಮಪಾತವು ಸೇನಾ ನೆಲೆಗಳನ್ನು ಅಪ್ಪಳಿಸಿದ್ದು,ಎಂಟು ಯೋಧರು ಹಿಮದಡಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಯೋಧರು ಗಸ್ತುತಂಡದ ಭಾಗವಾಗಿದ್ದರು.
ಸಮುದ್ರಮಟ್ಟದಿಂದ 18,000 ಅಡಿಗಳಿಗೂ ಹೆಚ್ಚು ಎತ್ತರದಲ್ಲಿ ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಹಿಮಪಾತ ಸಂಭವಿಸಿದ್ದು,ಹಿಮದಲ್ಲಿ ಸಿಕ್ಕಿಕೊಂಡಿರುವ ಯೋಧರನ್ನು ಉಳಿಸಲು ಸೇನೆಯು ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಕಾರಾಕೋರಂ ಪರ್ವತ ಶ್ರೇಣಿಯಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಗ್ಲೇಸಿಯರ್ ವಿಶ್ವದ ಅತ್ಯಂತ ಎತ್ತರದ ಯುದ್ಧಕ್ಷೇತ್ರವಾಗಿದ್ದು,ಇಲ್ಲಿ ಯೋಧರು ಹಿಮಹುಣ್ಣು ಮತ್ತು ಭಾರೀ ವೇಗದಿಂದ ಬೀಸುವ ಗಾಳಿಯ ವಿರುದ್ಧ ಸೆಣಸುತ್ತಿರುತ್ತಾರೆ. ಚಳಿಗಾಲದಲ್ಲಿ ಹಿಮಪಾತ ಮತ್ತು ಭೂಕುಸಿತಗಳು ಸಾಮಾನ್ಯವಾಗಿದ್ದು,ತಾಪಮಾನ ಮೈನಸ್ 60 ಡಿ.ಸೆ.ಗೂ ಇಳಿಯುತ್ತದೆ.