ಕೋಳಿ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದಲ್ಲ: ಬಾಬಾ ರಾಮ್‌ದೇವ್

Update: 2019-11-18 16:11 GMT

ಉಡುಪಿ, ನ.18: ಕೋಳಿಯ ಹೊಟ್ಟೆಯ ಒಳಗೆ ಕೆಟ್ಟ ರಕ್ತದಿಂದ ಸೃಷ್ಠಿಯಾಗುವ ಮತ್ತು ಗಲೀಜು ಸ್ಥಳದಿಂದ ಹೊರಗೆ ಬರುವ ಮೊಟ್ಟೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಲವೇ ಹೊರತು ಯಾವುದೇ ರೀತಿಯ ಪ್ರೊಟೀನ್ ಅಲ್ಲ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

 ಪರ್ಯಾಯ ಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮೂರನೆ ದಿನವಾದ ಸೋಮವಾರ ಸಂಜೆ ನಡೆದ ಮಹಿಳಾ ಮತ್ತು ಮಕ್ಕಳ ವಿಶೇಷ ಯೋಗ ಶಿಬಿರದಲ್ಲಿ ಅವರು ಮಾತನಾಡುತಿದ್ದರು.

ಈ ಜಗತ್ತಿನಲ್ಲಿ ಶಾಖಾಹಾರವೇ ಶ್ರೇಷ್ಠ ಹಾಗೂ ಸಾತ್ವಿಕವಾದ ಆಹಾರ ವಾಗಿದೆ. ಮಾಂಸಾಹಾರದಿಂದ ಮನಸ್ಸಿನಲ್ಲಿ ಕೆಟ್ಟ ವಿಚಾರ ಹಾಗೂ ಯೋಚನೆಗಳು ಮೂಡುತ್ತದೆ. ಆದರೆ ಸಸ್ಯಾಹಾರದಿಂದ ಸಾತ್ವಿಕ ವಿಚಾರಗಳು ಬರುತ್ತದೆ. ಆದುದರಿಂದ ಒಳ್ಳೆಯ ಆಹಾರ ಸೇವನೆಯಿಂದ ಉತ್ತಮರಾಗಲು ಸಾಧ್ಯವಾಗುತ್ತದೆ. ಕೋಕಾಕೋಲ ಎಂಬುದು ಟಾಯ್ಲೆಟ್ ಕ್ಲೀನರ್. ಅದರಿಂದ ನಮ್ಮ ದೇಹಕ್ಕೆ ಬೇಕಾದ ಯಾವುದೇ ಕ್ಯಾಲ್ಸಿಯಂ, ಪ್ರೋಟೀನ್ ಸಿಗುವುದಿಲ್ಲ ಎಂದರು.

ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ಯೋಗ ಎಂಬುದು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಮುಸ್ಲಿಮ್, ಕ್ರಿಶ್ಚಿಯನ್ನರಿಗೂ ವಿಸ್ತರಿಸಿದ ಕೀರ್ತಿ ಬಾಬಾ ರಾಮ್‌ದೇವ್ ಅವರಿಗೆ ಸಲ್ಲುತ್ತದೆ. ಬದುಕಲು ಆಸೆ ಇರುವ ಎಲ್ಲರಿಗೂ ಯೋಗ ಅತ್ಯಗತ್ಯವಾಗಿದೆ. ಯೋಗದ ಮೂಲಕ ಭಗವಂತನ ದರ್ಶನ ಸಾಧ್ಯ ಎಂದು ಹೇಳಿದರು.

ವೇದಿಕೆಯ ಕೆಳಗೆ ಯೋಗಾಸಾನ ಮಾಡುತ್ತಿದ್ದ ಗಿನ್ನೆಸ್ ದಾಖಲೆಯ ಯೋಗ ಪಟು ತನುಶ್ರೀ ಪಿತ್ರೋಡಿ ಅವರನ್ನು ವೇದಿಕೆಗೆ ಕರೆದ ಬಾಬಾ ರಾಮ್‌ದೇವ್ ತನ್ನೊಂದಿಗೆ ಯೋಗ ಮಾಡಿಸಿದರು. ತನುಶ್ರೀ ಮೂಲಕ ಸಾರ್ವಜನಿಕರಿಗೆ ವಿವಿಧ ಯೋಗಾಸಾನದ ಭಂಗಿಗಳನ್ನು ತೋರಿಸಿಕೊಟ್ಟರು.

ಶಿಬಿರವನ್ನು ಪತ್ರಕರ್ತೆ ಸಂಧ್ಯಾ ಪೈ ಉದ್ಘಾಟಿಸಿದರು. ಪಲಿಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಶಾಂತಾ ವಿ.ಆಚಾರ್ಯ, ಅನ್ನಪೂರ್ಣೆಶ್ವರ ಮಹಾಬಲ ಭಟ್, ಶಿಲ್ಪಾ ಸುವರ್ಣ, ಸುಜಾತ ಮಾರ್ಲ, ಪತಂಜಲಿಯ ಕರ್ನಾಟಕ ಪ್ರಭಾರಿ ಭವರ್‌ಲಾಲ್ ಆರ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News